ರಾಮ ಮಂದಿರ ಕಾಣಿಕೆ ದುರುಪಯೋಗ ಆರೋಪ: ತಪ್ಪಿತಸ್ಥರ ವಿರುದ್ಧ ಕ್ರಮ ಖಚಿತ – ಸಿ.ಟಿ. ರವಿ

ರಾಮ ಮಂದಿರ ಕಾಣಿಕೆ ದುರುಪಯೋಗ ಆರೋಪ: ತಪ್ಪಿತಸ್ಥರ ವಿರುದ್ಧ ಕ್ರಮ ಖಚಿತ – ಸಿ.ಟಿ. ರವಿ

ಬಾಗಲಕೋಟೆ: ರಾಮ ಮಂದಿರ ನಿರ್ಮಾಣವನ್ನು ಬಿಜೆಪಿ ಅಜೆಂಡಾ ಮಾಡಿಕೊಂಡಿರಲಿಲ್ಲದಿದ್ದರೆ, ಕಾಂಗ್ರೆಸ್ ತನ್ನ ನಿರ್ಣಯದಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿದ್ದರೆ, ಇಷ್ಟೊಂದು ಹೋರಾಟದ ಅಗತ್ಯವೇ ಉಂಟಾಗುತ್ತಿರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗ ರಾಮಭಕ್ತರ ಸರ್ಕಾರ ಅಧಿಕಾರದಲ್ಲಿದೆ. ರಾಮನ ಭಕ್ತಿಯ ಭಾವನೆಯನ್ನು ದುರುಪಯೋಗಪಡಿಸಿಕೊಂಡು ಕಾಣಿಕೆ ಹಣವನ್ನು ದುರ್ಬಳಕೆ ಮಾಡಿದವರನ್ನು ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದರು.

"ರಾಮ ಮಂದಿರ ಟ್ರಸ್ಟ್ ನೀಡಿದ ದೂರಿನ ಆಧಾರದ ಮೇಲೆಯೇ ಎಸ್‌ಐಟಿ ರಚನೆಯಾಗಿ ತನಿಖೆ ನಡೆಯುತ್ತಿದೆ. ಟ್ರಸ್ಟ್ ದೂರು ನೀಡದೇ ಇದ್ದಿದ್ದರೆ ಎಸ್‌ಐಟಿ ರಚನೆಯಾಗುತ್ತಿರಲಿಲ್ಲ. ರಾಮಭಕ್ತರ ಭಾವನೆಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳುವುದೇ ಸರ್ಕಾರದ ಉದ್ದೇಶ" ಎಂದು ತಿಳಿಸಿದರು.

"ದೇವಾಲಯದ ಕಾಣಿಕೆ ದುರುಪಯೋಗದ ಆರೋಪಗಳು ನಮಗೂ ಸಂಕಟ ತಂದಿವೆ. ಆದರೆ ರಾಮ ಮಂದಿರ ನಿರ್ಮಾಣವನ್ನೇ ವಿರೋಧಿಸಿದ್ದವರು, ಕರಸೇವಕರ ಮೇಲೆ ಗೋಲಿಬಾರ್ ನಡೆದಾಗ ಮೌನವಾಗಿದ್ದವರು ಇಂದು ಈ ಬೆಳವಣಿಗೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಯಾವ ದೇವಾಲಯಗಳನ್ನು ಆಕ್ರಮಣಕಾರರು ಧ್ವಂಸಗೊಳಿಸಿ ಮಸೀದಿ ಅಥವಾ ಇತರೆ ಕಟ್ಟಡಗಳನ್ನಾಗಿ ಪರಿವರ್ತಿಸಿದ್ದಾರೋ, ಅವುಗಳ ಪುನರ್‌ನಿರ್ಮಾಣಕ್ಕೆ ಕಾಂಗ್ರೆಸ್ ತನ್ನ ಎಐಸಿಸಿ ಅಥವಾ ಕೆಪಿಸಿಸಿ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲಿ. ಆಗ ಅವರ ನಿಜವಾದ ಭಕ್ತಿ ಸಾಬೀತಾಗುತ್ತದೆ" ಎಂದು ಸವಾಲು ಹಾಕಿದರು.

ಮೋದಿ ಮತ್ತು ಅಮಿತ್ ಶಾ ರಾಜೀನಾಮೆ ನೀಡಬೇಕು ಎಂಬ ಕಾಂಗ್ರೆಸ್ ನಾಯಕರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, "ರಾಮ ಮಂದಿರ ನಿರ್ಮಾಣದ ನೇತೃತ್ವ ವಹಿಸಿದವರ ಮೇಲೆಯೇ ಆರೋಪ ಹೊರಿಸುವುದು ಸರಿಯಲ್ಲ" ಎಂದು ಹೇಳಿದರು.

ಕಾಮೆಂಟ್‌ಗಳು