ಬಸವೇಶ್ವರ ಹೈಸ್ಕೂಲ್‌ನಲ್ಲಿ ಶಾಲಾ ಸಂಸತ್ ಚುನಾವಣೆ: ಪ್ರಜಾಪ್ರಭುತ್ವದ ಪಾಠ ಕಲಿತ ವಿದ್ಯಾರ್ಥಿಗಳು
ಬಾಗಲಕೋಟೆ: ಬಿ.ವಿ.ವಿ. ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ಚುನಾವಣೆ ಶನಿವಾರ ಉತ್ಸಾಹಭರಿತ ಹಾಗೂ ಶಿಸ್ತುಬದ್ಧವಾಗಿ ನಡೆಯಿತು.
ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವು, ಮತದಾನದ ಮಹತ್ವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಚುನಾವಣೆ ಆಯೋಜಿಸಲಾಗಿತ್ತು. ವಿವಿಧ ಹುದ್ದೆಗಳಿಗೆ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ತಮ್ಮ ಚುನಾವಣಾ ಭರವಸೆ ಹಾಗೂ ಕಾರ್ಯಯೋಜನೆಗಳನ್ನು ವಿದ್ಯಾರ್ಥಿಗಳ ಮುಂದೆ ಮಂಡಿಸಿದರು. ಬಳಿಕ ರಹಸ್ಯ ಮತದಾನದ ಮೂಲಕ ಮತದಾನ ನಡೆಯಿತು.
ರಾಷ್ಟ್ರೀಯ ಚುನಾವಣೆಯ ಮಾದರಿಯಲ್ಲೇ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ನಡೆಸಿ ಫಲಿತಾಂಶ ಪ್ರಕಟಿಸಲಾಯಿತು. ಶಾಲೆಯ 1,025 ವಿದ್ಯಾರ್ಥಿಗಳ ಪೈಕಿ ವರ್ಗವಾರು ಆಯ್ಕೆಯಾದ 64 ಮತದಾರರು ತಮ್ಮ ಹಕ್ಕು ಚಲಾಯಿಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ಇದರಿಂದ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆ, ಮತದಾನದ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಪ್ರಾಯೋಗಿಕ ಅನುಭವ ದೊರೆಯಿತು.
ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಎಸ್.ಕೆ. ರಾಥೋಡ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ, ಉತ್ತಮ ನಾಯಕತ್ವದ ಅಗತ್ಯ ಮತ್ತು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲಾ ಸಂಸತ್ ಸಂಯೋಜಕ ಎಂ.ವೈ. ಕೂಗನವರ ಅವರ ನೇತೃತ್ವದಲ್ಲಿ ಚುನಾವಣೆ ಯಶಸ್ವಿಯಾಗಿ ನಡೆಯಿತು. ಆರ್.ವಿ. ಮುದಿಉಪ್ಪನವರ, ಆರ್.ಎಸ್. ಕ್ಯಾತನ್ನವರ, ಎಸ್.ಬಿ. ಗಲಗಲಿ, ಡಿ.ಎಸ್.ಎಸ್. ಬದಾಮಿ, ಎಸ್.ಬಿ. ಮಡಿವಾಳರ, ಆರ್.ಎಂ. ಬೆಣ್ಣೂರ, ಎಚ್.ಎ. ಪಾಟೀಲ, ಪಿ.ಆರ್. ಬಿಲ್ಲಾರ, ಆರ್.ಜಿ. ಕುಲಕರ್ಣಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ