ಬಾಗಲಕೋಟೆಯಲ್ಲಿ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ: 250ಕ್ಕೂ ಹೆಚ್ಚು ಮಂದಿಗೆ ತಪಾಸಣೆ, 50ಕ್ಕೂ ಹೆಚ್ಚು ಜನರಿಂದ ರಕ್ತದಾನ
ಬಾಗಲಕೋಟೆ, ಜು. 13: "ರಕ್ತದಾನ ಮಹಾದಾನ" ಎಂಬ ಸಂದೇಶದೊಂದಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ-1 ಮತ್ತು 2, ರೆಡ್‌ಕ್ರಾಸ್ ಘಟಕ, ತೋಟಗಾರಿಕಾ ಮಹಾವಿದ್ಯಾಲಯ ಆಲಮೇಲ, ಡೀನ್ ವಿದ್ಯಾರ್ಥಿ ಕಲ್ಯಾಣ ವಿಭಾಗ ಹಾಗೂ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಶ್ರೀ ಕುಮಾರೇಶ್ವರ ವೈದ್ಯಕೀಯ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ತಮ್ಮಯ್ಯ ಎನ್., "ಆರೋಗ್ಯವೇ ಅತ್ಯಂತ ದೊಡ್ಡ ಸಂಪತ್ತು. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರಕ್ತದಾನದಿಂದ ಅನೇಕ ಜೀವಗಳನ್ನು ಉಳಿಸಬಹುದು. ಇಂತಹ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುವುದು ಅಗತ್ಯ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು, ಡೀನ್ ವಿದ್ಯಾರ್ಥಿ ಕಲ್ಯಾಣ ಡಾ. ಎಂ.ಜಿ. ಕೆರುಟಗಿ, ಆಸ್ತಿ ಅಧಿಕಾರಿ ವಿಜಯಭಾಸ್ಕರ ಭಜಂತ್ರಿ, ತೋಟಗಾರಿಕಾ ಮಹಾವಿದ್ಯಾಲಯ ಆಲಮೇಲ ವಿಶೇಷಾಧಿಕಾರಿ ಡಾ. ಐ.ಬಿ. ಬಿರಾದಾರ, ಬೀಜ ಘಟಕದ ವಿಶೇಷಾಧಿಕಾರಿ ಡಾ. ರವೀಂದ್ರ ಜಾವಡಗಿ, ಪಿಪಿಎಂಸಿ ವಿಶೇಷಾಧಿಕಾರಿ ಡಾ. ಈ. ರಾಜಶೇಖರ, ಎನ್‌ಎಸ್‌ಎಸ್ ಸಂಯೋಜಕ ಡಾ. ವಸಂತ ಎಂ. ಗಾಣಿಗೇರ, ಸಂವಹನ ಕೇಂದ್ರದ ಸಂಪಾದಕ ಡಾ. ಶಶಿಕುಮಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಡಾ. ಗೌರಿ ಲಂಕೇಶ್ವರ ಕಲಬುರಗಿ, ಡಾ. ಕೇಶವ ಕುಲಕರ್ಣಿ ಹಾಗೂ ವೈದ್ಯಕೀಯ ಸಿಬ್ಬಂದಿ ಆರೋಗ್ಯ ತಪಾಸಣೆ ಮತ್ತು ರಕ್ತ ಸಂಗ್ರಹ ಕಾರ್ಯದಲ್ಲಿ ಭಾಗವಹಿಸಿದರು.
ಶಿಬಿರದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ, 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಈ ಕಾರ್ಯಕ್ರಮವನ್ನು ಡೀನ್ ಡಾ. ಶಾಂತಪ್ಪ ತಿರಕಣ್ಣನವರ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ರಾಜಶೇಖರ ಎಂ. ಹಿರೇಮಠ, ಡಾ. ಸರ್ವಮಂಗಳ ಚೋಳಿನ ಹಾಗೂ ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ರಮೇಶ್ ಸಂಯೋಜಿಸಿದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ