ಬಾದಾಮಿ, ಜು.17: ಅಮೃತ್ ಭಾರತ ನಿಲ್ದಾಣ ಯೋಜನೆಯಡಿ ₹15.01 ಕೋಟಿ ವೆಚ್ಚದಲ್ಲಿ ಪುನರ್‌ಅಭಿವೃದ್ಧಿಗೊಂಡ ಬಾದಾಮಿ ರೈಲು ನಿಲ್ದಾಣವನ್ನು ಉದ್ಘಾಟಿಸಿದ ಬಳಿಕ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಭಿವೃದ್ಧಿಯೇ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.
ದೇಶಾದ್ಯಂತ 75 ಅಮೃತ್ ಭಾರತ ರೈಲು ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದು, ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹3 ಲಕ್ಷ ಕೋಟಿ ಬಜೆಟ್ ಮೀಸಲಿಟ್ಟಿದೆ ಎಂದು ತಿಳಿಸಿದರು.
ಕುಡಚಿ ರೈಲು ಮಾರ್ಗದ 37 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಇನ್ನೂ ಎಂಟು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ಭಾಗದ ರೈಲ್ವೆ ಅಭಿವೃದ್ಧಿಗೆ ₹1,900 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಅಮೃತ್ ಭಾರತ ಯೋಜನೆ ಜಾರಿಗೊಳಿಸಲಾಗಿದೆ. ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ರೈಲು ಸೇವೆಗಳನ್ನು ಪುನರಾರಂಭಿಸಿ, 30 ಹೊಸ ರೈಲುಗಳನ್ನು ಸೇರ್ಪಡೆ ಮಾಡಲಾಗಿದೆ. ಅಪಘಾತ ತಡೆಗಟ್ಟಲು 'ಸುರಕ್ಷಾ ಕವಚ' ವ್ಯವಸ್ಥೆ ಅಳವಡಿಸಲಾಗಿದೆ ಎಂದರು.
ಶಾಹಪುರ–ವಾಡಿ ರೈಲು ಮಾರ್ಗ ಕಾಮಗಾರಿ 2028ರ ಏಪ್ರಿಲ್ ಒಳಗೆ ಪೂರ್ಣಗೊಳ್ಳಲಿದ್ದು, ದೇಶದಲ್ಲಿ 23 ಹೊಸ ರೈಲು ನಿಲ್ದಾಣಗಳು ಹಾಗೂ ಹೊಸ ರೈಲು ಮಾರ್ಗಗಳ ನಿರ್ಮಾಣ ಕಾರ್ಯವೂ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೈಡ್ರೋಜನ್ ರೈಲು ಯೋಜನೆಗೆ ಚಾಲನೆ ನೀಡಿರುವುದು ದೇಶದ ರೈಲ್ವೆ ಕ್ಷೇತ್ರದ ಹೊಸ ಮೈಲಿಗಲ್ಲಾಗಿದೆ. ಜಲಶಕ್ತಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ₹5 ಲಕ್ಷ ಕೋಟಿ ಅನುದಾನ ನೀಡಲಾಗಿದೆ. 2047ರ ವಿಕಸಿತ ಭಾರತದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
"ರಾಜಕಾರಣ ಚುನಾವಣೆಯ ಸಮಯದಲ್ಲಿ ಮಾಡೋಣ. ಉಳಿದ ದಿನಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡೋಣ" ಎಂದು ಸಚಿವ ಸೋಮಣ್ಣ ಕರೆ ನೀಡಿದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ