ಕುರಿ ಕಾಯುತ್ತಿದ್ದ ಕೈಯಲ್ಲಿ ಈಗ ಸ್ಟೆತೊಸ್ಕೋಪ್: ಬಡತನ ಮೆಟ್ಟಿ ನಿಂತು ನೀಟ್‌ನಲ್ಲಿ ಸಾಧನೆ ಮೆರೆದ ಕೊಪ್ಪಳದ ಪುಟ್ಟರಾಜ!
ಕುರಿ ಕಾಯುತ್ತಿದ್ದ ಕೈಯಲ್ಲಿ ಈಗ ಸ್ಟೆತೊಸ್ಕೋಪ್: ಬಡತನ ಮೆಟ್ಟಿ ನಿಂತು ನೀಟ್‌ನಲ್ಲಿ ಸಾಧನೆ ಮೆರೆದ ಕೊಪ್ಪಳದ ಪುಟ್ಟರಾಜ!
ಕೊಪ್ಪಳ:ಸಾಧಿಸಬೇಕೆಂಬ ಛಲ ಒಂದಿದ್ದರೆ ಬಡತನ, ಮೂಲಭೂತ ಸೌಕರ್ಯಗಳ ಕೊರತೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೊಪ್ಪಳದ ಪ್ರತಿಭಾವಂತ ಯುವಕ ಪುಟ್ಟರಾಜ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಕಠಿಣ ಪರಿಶ್ರಮ, ಆತ್ಮವಿಶ್ವಾಸ ಹಾಗೂ ನಿರಂತರ ಅಧ್ಯಯನದ ಮೂಲಕ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದಾದ ನೀಟ್ (NEET) ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ವೈದ್ಯನಾಗುವ ತನ್ನ ಕನಸಿನತ್ತ ದೃಢ ಹೆಜ್ಜೆ ಇಟ್ಟಿದ್ದಾರೆ.
ಕೊಪ್ಪಳ ಮೆಡಿಕಲ್ ಕಾಲೇಜಿನಿಂದ ಕೇವಲ ೩ ಕಿಲೋಮೀಟರ್ ದೂರದಲ್ಲಿರುವ ಅಡವಿಯ ಸಣ್ಣ ಮನೆಯೊಂದರಲ್ಲಿ ಬೆಳೆದ ಪುಟ್ಟರಾಜ, ಆರ್ಥಿಕ ಮುಗ್ಗಟ್ಟು ಹಾಗೂ ಮನೆಯಲ್ಲಿ ವಿದ್ಯುತ್ ಸೌಲಭ್ಯವೇ ಇಲ್ಲದಿದ್ದರೂ ಧೃತಿಗೆಡದೆ ಅಭ್ಯಾಸ ನಡೆಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಎಸ್.ಟಿ (ST) ವಿಭಾಗದಲ್ಲಿ ದೇಶಕ್ಕೆ ೬೯೪ನೇ ರ‍್ಯಾಂಕ್ ಪಡೆಯುವ ಮೂಲಕ ಕೊಪ್ಪಳ ಜಿಲ್ಲೆಗೆ ಹಾಗೂ ಇಡೀ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೀರ್ತಿ ತಂದಿದ್ದಾರೆ.
ಕಷ್ಟಗಳ ನಡುವೆಯೂ ಸಾಗಿದ ಶಿಕ್ಷಣ ಪಥ...
ಪುಟ್ಟರಾಜ ಅವರ ಪ್ರಾಥಮಿಕ ಶಿಕ್ಷಣ ಹನುಮನಹಳ್ಳಿಯಲ್ಲಿ (೨ನೇ ತರಗತಿವರೆಗೆ) ಪ್ರಾರಂಭವಾಯಿತು. ನಂತರ ೩ ಮತ್ತು ೪ನೇ ತರಗತಿಯನ್ನು ಬೇವೂರಿನ ಶಾಲೆಯಲ್ಲಿ ಪೂರೈಸಿ, ಅಲ್ಲಿಯೇ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾದರು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಇವರು, ಗಂಗಾವತಿಯ ಕಾಲೇಜಿನಲ್ಲಿ ಪದವಿ ಪೂರ್ವ (PUC) ಶಿಕ್ಷಣವನ್ನು ಪೂರ್ಣಗೊಳಿಸಿ ನೀಟ್ ಪರೀಕ್ಷೆಗೆ ಸಜ್ಜಾದರು.
ಕಾಲೇಜಿಗೆ ರಜೆ ಸಿಕ್ಕರೆ ಕುರಿ ಕಾಯುತ್ತಿದ್ದ ಸಾಧಕ!
ವೈದ್ಯಕೀಯ ಪರೀಕ್ಷೆಯ ಸಿದ್ಧತೆಯ ನಡುವೆಯೂ ಪುಟ್ಟರಾಜ ತಮ್ಮ ಹಳ್ಳಿಯ ಕಾಯಕವನ್ನು ಮರೆಯಲಿಲ್ಲ. ಕಾಲೇಜಿಗೆ ರಜೆ ಸಿಕ್ಕಾಗಲೆಲ್ಲಾ ಮನೆಗೆ ಬಂದು ತಂದೆ-ತಾಯಿಗೆ ಆಸರೆಯಾಗಿ ಕುರಿ ಮೇಯಿಸುವುದು, ಮನೆ ಕೆಲಸ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ವಿದ್ಯುತ್ ಇಲ್ಲದ ಕಷ್ಟದ ವಾತಾವರಣದಲ್ಲೂ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಓದಿ ಇಂದು ವೈದ್ಯಕೀಯ ಶಿಕ್ಷಣದ ಹೊಸ್ತಿಲಲ್ಲಿ ನಿಂತಿದ್ದಾರೆ.
ಪೋಷಕರ ತ್ಯಾಗಕ್ಕೆ ಸಿಕ್ಕ ಪ್ರತಿಫಲ...
ಪುಟ್ಟರಾಜ ಅವರ ಈ ಅಮೋಘ ಸಾಧನೆಯ ಹಿಂದೆ ತಂದೆ ಮಹಾಬಳೇಶ ಹಾಗೂ ತಾಯಿ ಸಾವಿತ್ರಿ ಅವರ ನಿಸ್ವಾರ್ಥ ತ್ಯಾಗ ಮತ್ತು ಪ್ರೋತ್ಸಾಹವಿದೆ. ಕಷ್ಟಪಟ್ಟು ಕೃಷಿ ಕೂಲಿ ಮಾಡುತ್ತಾ ಮಗನ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತ ಪೋಷಕರ ಶ್ರಮಕ್ಕೆ ಇಂದು ಸಾರ್ಥಕತೆ ಸಿಕ್ಕಿದೆ. "ಕಷ್ಟಪಟ್ಟು ಓದಿದರೆ ಸಾಧನೆ ಖಂಡಿತ" ಎಂಬುದನ್ನು ನಿರೂಪಿಸಿರುವ ಪುಟ್ಟರಾಜ ಅವರ ಈ ಯಶೋಗಾಥೆ ಗ್ರಾಮೀಣ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ