ಗ್ರಾಮೀಣ ಜನರ ಮನೆಬಾಗಿಲಿಗೆ ಅಂಚೆ, ಬ್ಯಾಂಕಿಂಗ್ ಹಾಗೂ ಸರ್ಕಾರಿ ಪಿಂಚಣಿ ಸೇವೆ: ಮೋಹನ್ ಎಸ್. ಮಾಳಗೋದೆ
ಬಾಗಲಕೋಟೆ: ಭಾರತೀಯ ಅಂಚೆ ಇಲಾಖೆಯ ಬಾಗಲಕೋಟೆ ವಿಭಾಗದ ವತಿಯಿಂದ ಆಲಗುಂಡಿ ಬಿ.ಕೆ. ಗ್ರಾಮದಲ್ಲಿ ನೂತನ ಶಾಖಾ ಅಂಚೆ ಕಚೇರಿಯ ಪ್ರಾರಂಭೋತ್ಸವ ನಡೆಯಿತು.
ಬಾಗಲಕೋಟೆ ವಿಭಾಗದ ಅಂಚೆ ಅಧೀಕ್ಷಕ ಮೋಹನ್ ಎಸ್. ಮಾಳಗೋದಿ, ಗುರುಪಾದ ಮಹಾಸ್ವಾಮಿಗಳು, ಶಿವಶರಣಾನಂದ ಸ್ವಾಮಿಗಳು ಹಾಗೂ ಶಿವಲಿಂಗಯ್ಯ ಮಹಾಲಿಂಗಯ್ಯ ಹಿರೇಮಠ ಅವರು ನೂತನ ಶಾಖಾ ಅಂಚೆ ಕಚೇರಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಂಚೆ ಅಧೀಕ್ಷಕ ಮೋಹನ್ ಎಸ್. ಮಾಳಗೋದೆ, “ಅಂಚೆ ಇಲಾಖೆಯು ಗ್ರಾಮೀಣ ಭಾರತದ ಜೀವನಾಡಿಯಾಗಿದೆ. ಆಲಗುಂಡಿ ಬಿ.ಕೆ. ಗ್ರಾಮದಲ್ಲಿ ಆರಂಭವಾಗಿರುವುದು ಬಾಗಲಕೋಟೆ ವಿಭಾಗದ 283ನೇ ಶಾಖಾ ಅಂಚೆ ಕಚೇರಿ” ಎಂದು ತಿಳಿಸಿದರು.
ಇನ್ನು ಗ್ರಾಮದಲ್ಲೇ ಪಿಂಚಣಿ ಸೌಲಭ್ಯ
ಈ ಹಿಂದೆ ಅಂಚೆ ಕಚೇರಿಯ ವಿವಿಧ ಕೆಲಸಗಳಿಗಾಗಿ ಹಾಗೂ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಶೇಷಚೇತನರ ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಗ್ರಾಮಸ್ಥರು ಪಟ್ಟಣಕ್ಕೆ ತೆರಳಬೇಕಾಗಿತ್ತು. ಇದೀಗ ಆಲಗುಂಡಿ ಬಿ.ಕೆ. ಗ್ರಾಮದಲ್ಲಿಯೇ ಅಂಚೆ ಕಚೇರಿ ಆರಂಭವಾಗಿರುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಸರ್ಕಾರದ ವಿವಿಧ ಪಿಂಚಣಿ ಸೌಲಭ್ಯಗಳು ಹಾಗೂ ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಯೋಜನೆಗಳಡಿ ಜಮೆಯಾಗುವ ಹಣವನ್ನು ಅಂಚೆ ಇಲಾಖೆಯ ಲಭ್ಯ ಸೇವೆಗಳ ಮೂಲಕ ಗ್ರಾಮದಲ್ಲಿಯೇ ಪಡೆಯಲು ಅನುಕೂಲವಾಗಲಿದೆ. ಗ್ರಾಮಸ್ಥರು ಈ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅಂಚೆ ಇಲಾಖೆ ಕೇವಲ ಪತ್ರ ವಿತರಣೆಗೆ ಸೀಮಿತವಲ್ಲ
ಭಾರತೀಯ ಅಂಚೆ ಇಲಾಖೆ ಶತಮಾನಕ್ಕೂ ಹೆಚ್ಚು ಕಾಲದಿಂದ ದೇಶದ ಹಳ್ಳಿಗಳು, ಪರ್ವತ ಪ್ರದೇಶಗಳು, ನಗರಗಳು, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳವರೆಗೆ ತನ್ನ ಸೇವೆಯನ್ನು ವಿಸ್ತರಿಸಿದೆ. ಸರ್ಕಾರದ ವಿವಿಧ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿಯೂ ಅಂಚೆ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಾಳಗೋದಿ ಹೇಳಿದರು.
ಅಂಚೆ ಇಲಾಖೆ ಈಗ ಕೇವಲ ಪತ್ರಗಳನ್ನು ಸಾಗಿಸುವ ಸಂಸ್ಥೆಯಾಗಿ ಉಳಿದಿಲ್ಲ. ಬ್ಯಾಂಕಿಂಗ್, ಉಳಿತಾಯ ಯೋಜನೆಗಳು, ವಿಮೆ, ಪಿಂಚಣಿ ವಿತರಣೆ, ಡಿಜಿಟಲ್ ಪಾವತಿ ಹಾಗೂ ಪಾರ್ಸೆಲ್ ವಿತರಣೆ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತಿದೆ. ಅದರಲ್ಲೂ ಆರ್‌ಡಿ ಖಾತೆಗಳಂತಹ ಉಳಿತಾಯ ಯೋಜನೆಗಳು ಜನರಲ್ಲಿ ಹಣ ಉಳಿತಾಯದ ಅಭ್ಯಾಸ ಬೆಳೆಸಲು ಸಹಕಾರಿಯಾಗಿವೆ ಎಂದರು.
ಇಂತಹ ಸೇವೆಗಳು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಜನರ ಮನೆಬಾಗಿಲಿಗೂ ತಲುಪಬೇಕು ಎಂಬುದು ಪ್ರಮುಖ ಉದ್ದೇಶವಾಗಿದೆ. ಆಲಗುಂಡಿ ಬಿ.ಕೆ.ಯಲ್ಲಿ ಶಾಖಾ ಅಂಚೆ ಕಚೇರಿ ಆರಂಭವಾಗಿರುವುದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಿ.ಜಿ. ಕಾಂಬಳೆ, ಬಿ.ಎಚ್. ಮ್ಯಾಗೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಪಿ.ಎನ್. ನಾಗೇಶರಾವ್ ಕಾರ್ಯಕ್ರಮ ನಿರೂಪಿಸಿದರು. ರವಿ ಸೊನ್ನದ ಸ್ವಾಗತಿಸಿದರು. ಎಚ್.ಸಿ. ಹೂಗಾರ ವಂದನಾರ್ಪಣೆ ಸಲ್ಲಿಸಿದರು.
PetkarMedia | ಬಾಗಲಕೋಟೆ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ