ಎಸ್‌ಐಆರ್ ಪ್ರಗತಿ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಡಿಸಿ ಸಂಗಪ್ಪ ಸಭೆ

ಎಸ್‌ಐಆರ್ ಪ್ರಗತಿ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಡಿಸಿ ಸಂಗಪ್ಪ ಸಭೆ

ಬಾಗಲಕೋಟೆ, ಜು. 10: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಿ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಎಸ್‌ಐಆರ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಶೇ.95ರಷ್ಟು ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಣೆ ಮಾಡಲಾಗಿದೆ. ಈ ಪೈಕಿ ಶೇ.17.85ರಷ್ಟು ಫಾರ್ಮ್‌ಗಳ ಡಿಜಿಟೈಜೇಷನ್ ಪೂರ್ಣಗೊಂಡಿದ್ದು, ಉಳಿದ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೂತ್ ಮಟ್ಟದ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಶನಿವಾರ ಮತ್ತು ಭಾನುವಾರ ರಜೆ ಎಂದು ಪರಿಗಣಿಸದೆ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯ ಎಲ್ಲ ಮತಕ್ಷೇತ್ರಗಳಲ್ಲಿ ಎನ್ಯೂಮರೇಷನ್ ಫಾರ್ಮ್ ವಿತರಣೆಯು ಶೇ.90ಕ್ಕಿಂತ ಹೆಚ್ಚು ಪೂರ್ಣಗೊಂಡಿದ್ದರೂ, ಡಿಜಿಟೈಜೇಷನ್ ಪ್ರಗತಿ ಕಡಿಮೆ ಇರುವುದರಿಂದ ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕಡಿಮೆ ಪ್ರಗತಿ ಸಾಧಿಸಿರುವ ತಾಲೂಕುಗಳಲ್ಲಿ ವಿಶೇಷ ಗಮನ ಹರಿಸಿ ಕಾರ್ಯವನ್ನು ವೇಗಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಂಗಪ್ಪ, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ತಹಶೀಲ್ದಾರ ವಾಸುದೇವ ಸ್ವಾಮಿ, ಚುನಾವಣಾ ವಿಭಾಗದ ಶಿರಸ್ತೇದಾರ ಮಹೇಶ ಪಾಂಡವ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಜಾಗೃತಿ ಕಾರ್ಯಕ್ರಮಗಳು

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಸ್ವೀಪ್ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ವಿವಿಧ ಇಲಾಖೆ, ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಮೂರನೇ ವಾರದಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಮಾಹಿತಿ ನೀಡಿದರು.


ಕಾಮೆಂಟ್‌ಗಳು