ಮುಂಗಾರು ಮಳೆ ಕೊರತೆ: ಬೆಳೆ ಸಂರಕ್ಷಣೆಗೆ ವೈಜ್ಞಾನಿಕ ಕ್ರಮ ಅಗತ್ಯ
ಬಾಗಲಕೋಟೆ, ಜು.27: ಕರ್ನಾಟಕದಲ್ಲಿ ಪ್ರಸಕ್ತ ವರ್ಷದ ಮುಂಗಾರು ಮಳೆ ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಮೇಲೆ ಉಂಟಾಗುತ್ತಿರುವ ಪರಿಣಾಮ ಮತ್ತು ಅವುಗಳ ನಿರ್ವಹಣಾ ಕ್ರಮಗಳ ಕುರಿತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ (ಜಿ.ಪಂ.) ಸಹಯೋಗದಲ್ಲಿ ವೈಜ್ಞಾನಿಕ ಸಂವಾದ ಕಾರ್ಯಕ್ರಮ ನಡೆಯಿತು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿ, ರಾಜ್ಯದಲ್ಲಿನ ಪ್ರಸಕ್ತ ಮುಂಗಾರು ಮಳೆಯ ಸ್ಥಿತಿ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಿತ್ತನೆ ಪ್ರದೇಶ, ಮಳೆ ಕೊರತೆ ದಾಖಲಾದ ಜಿಲ್ಲೆಗಳು ಹಾಗೂ ಮುಂಗಾರು ಬಿತ್ತನೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.
ಮಳೆ ಕೊರತೆಯಿಂದ ಪ್ರಮುಖ ಬೆಳೆಗಳ ಬೆಳವಣಿಗೆ ಮತ್ತು ಇಳುವರಿ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಬರ ಪರಿಸ್ಥಿತಿ ರೈತರ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ವೈಜ್ಞಾನಿಕ ಮಾಹಿತಿಯೊಂದಿಗೆ ವಿವರಿಸಿದರು.
ಎಲ್-ನಿನೋ ಪರಿಣಾಮ ಕುರಿತು ಮಾಹಿತಿ
ಸಂಶೋಧನಾ ನಿರ್ದೇಶಕ ಡಾ. ಬಿ. ಫಕ್ರುದ್ದೀನ್ ಮಾತನಾಡಿ, ಜಾಗತಿಕ ಹವಾಮಾನ ವೈಪರೀತ್ಯಗಳು ಹಾಗೂ ಎಲ್-ನಿನೋ ಪರಿಣಾಮದ ಕುರಿತು ವಿವರಿಸಿದರು. ಮಳೆಯ ಹಂಚಿಕೆಯಲ್ಲಿ ಉಂಟಾಗುವ ವ್ಯತ್ಯಾಸಗಳು ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಸಿದರು.
ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು ಅವರು ಬರ ಪರಿಸ್ಥಿತಿಯಲ್ಲಿ ಬೆಳೆ ವೈವಿಧ್ಯತೆ ಅಳವಡಿಸಿಕೊಳ್ಳುವುದು, ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದು, ಬೆಳೆ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದು ಸೇರಿದಂತೆ ರೈತರು ಕೈಗೊಳ್ಳಬೇಕಾದ ತಾಂತ್ರಿಕ ಕ್ರಮಗಳ ಕುರಿತು ಮಾಹಿತಿ ನೀಡಿದರು.
ರೈತರು–ವಿಜ್ಞಾನಿಗಳ ನೇರ ಸಂವಾದ
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 15ಕ್ಕೂ ಹೆಚ್ಚು ರೈತರು ಭಾಗವಹಿಸಿ, ತಮ್ಮ ಪ್ರದೇಶದಲ್ಲಿನ ಬೆಳೆಗಳ ಸ್ಥಿತಿಯನ್ನು ವಿಜ್ಞಾನಿಗಳ ಗಮನಕ್ಕೆ ತಂದರು. ಬೆಳೆಗಳನ್ನು ಸಂರಕ್ಷಿಸಲು ಅನುಸರಿಸಬೇಕಾದ ಕ್ರಮಗಳು, ಸರ್ಕಾರದಿಂದ ದೊರೆಯುವ ನೆರವು ಹಾಗೂ ಅಗತ್ಯ ತಾಂತ್ರಿಕ ಸಲಹೆಗಳ ಕುರಿತು ಚರ್ಚಿಸಿದರು.
ವೀರಯ್ಯ ಸ್ವಾಮಿ (ಹಾಲಗೇರಿ), ಬಸವರೆಡ್ಡಿ ರೆಡ್ಡರ (ಮುಷ್ಠಿಗೇರಿ), ಬಾಳಪ್ಪ ಬೆಳಕೋಡ (ಗೋಕಾಕ), ಶಿವಪ್ರಸಾದ್ ಗದ್ದಿ (ಹುನಗುಂದ) ಸೇರಿದಂತೆ ರೈತರು ಸಂವಾದದಲ್ಲಿ ಪಾಲ್ಗೊಂಡರು.
ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ. ಶಶಿಕುಮಾರ ಏವೂರ, ಡಾ. ಸಂಜೀವರಡ್ಡಿ, ಡಾ. ಪ್ರವೀಣ ಜೋಗಳೇಕರ್, ಡಾ. ಮಂಜುನಾಥ ಹುಬ್ಬಳ್ಳಿ, ಶ್ರೀಪಾದ ವಿ., ಡಾ. ರುದ್ರೇಶ ಡಿ.ಎಲ್. ಹಾಗೂ ಡಾ. ಶಶೀಧರ ರೈತರೊಂದಿಗೆ ವೈಜ್ಞಾನಿಕ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಕೃಷಿ ಜಂಟಿ ನಿರ್ದೇಶಕ ರುದ್ರೇಶಪ್ಪ, ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ಡಾ. ದೀಪಾ ತೇರದಾಳ ಕಾರ್ಯಕ್ರಮ ನಿರೂಪಿಸಿದರು. ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.
ವರದಿ: PetkarMedia.com

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ