ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ಶಾಸಕ ಯಶಪಾಲ ಸುವರ್ಣ ವಿರುದ್ಧ ಎಫ್‌ಐಆರ್‌ಗೆ ಆಗ್ರಹ

ಬಾಗಲಕೋಟೆ: ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ಶಾಸಕ ಯಶಪಾಲ ಸುವರ್ಣ ವಿರುದ್ಧ ಎಫ್‌ಐಆರ್‌ಗೆ ಆಗ್ರಹ

ಬಾಗಲಕೋಟೆ, ಜುಲೈ 31: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉಡುಪಿ ಶಾಸಕ ಯಶಪಾಲ ಸುವರ್ಣ ನೀಡಿರುವ ಹೇಳಿಕೆಯನ್ನು ಖಂಡಿಸಿ, ಅವರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಶುಕ್ರವಾರ ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.


ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ನಿರ್ದೇಶನದಂತೆ ನಡೆದ ಪ್ರತಿಭಟನೆಯ ಬಳಿಕ ಕಾರ್ಯಕರ್ತರು ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ನಾಗರಾಜ ಎಸ್. ಹದ್ಲಿ, ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿರುವ ಶಾಸಕನೊಬ್ಬ ವಿರೋಧ ಪಕ್ಷದ ನಾಯಕರ ವಿರುದ್ಧ ಪ್ರಚೋದನಕಾರಿ ಹಾಗೂ ಬೆದರಿಕೆ ಹಾಕುವ ರೀತಿಯ ಭಾಷೆ ಬಳಸಿರುವುದು ಖಂಡನೀಯ ಎಂದು ಹೇಳಿದರು.

ಇಂತಹ ಹೇಳಿಕೆಗಳು ಕೇವಲ ವ್ಯಕ್ತಿಯ ವಿರುದ್ಧದ ದಾಳಿಯಲ್ಲ, ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ವಿರೋಧ ಪಕ್ಷದ ಸ್ಥಾನಮಾನದ ಮೇಲಿನ ದಾಳಿಯಾಗಿವೆ ಎಂದು ಆರೋಪಿಸಿದರು. ಕಾನೂನು ಎಲ್ಲರಿಗೂ ಸಮಾನವಾಗಿದ್ದರೆ ಶಾಸಕ ಯಶಪಾಲ ಸುವರ್ಣ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಈ ಹೇಳಿಕೆಯನ್ನು ಖಂಡಿಸದಿದ್ದರೆ, ದ್ವೇಷಪೂರಿತ ರಾಜಕಾರಣಕ್ಕೆ ಪರೋಕ್ಷ ಬೆಂಬಲ ನೀಡಿದಂತಾಗುತ್ತದೆ ಎಂದು ಅವರು ಟೀಕಿಸಿದರು. ವಿರೋಧ ಪಕ್ಷದ ನಾಯಕರ ವಿರುದ್ಧ ದ್ವೇಷ ಹರಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನವನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದರು.

ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನಿನ ಪ್ರಕಾರ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ ಮುಲ್ಲಾ, ಎಸ್.ಎನ್. ರಾಂಪೂರ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕ ಶ್ರೀಧರ ನೀಲನಾಯಕ, ಜಟ್ಟೆಪ್ಪ ಮಾದಾಪೂರ, ಸುನೀಲ ಬಾಲಗಾವಿ, ಹಾಜಿಸಾಬ ದಂಡಿನ, ಇಲಿಯಾಸ್ ಮದರಖಂಡಿ, ತಿಪ್ಪಣ್ಣ ನೀಲನಾಯಕ, ಸಿದ್ದಣ್ಣ ಗೋಡಿ, ಫಕೀರಪ್ಪ ಮಾದರ, ಜಯಜೇಂದ್ರ ಪೂಜಾರಿ, ಅಜೇಯ ಕಪಾಟೆ, ಪ್ರದೀಪ ಪಾಡಮುಖಿ, ಬಂದೇನವಾಜ ಬದಾಮಿ, ಕೃಷ್ಣ ಬದಾಮಿ, ಶಿವಾನಂದ ಬಸರಕೋಡ, ರಾಜೇಶ ವೈದ್ಯ, ಕೇಶವ ಕುಲಕರ್ಣಿ, ಶಿವಾನಂದ ಮಲ್ಲಾಪುರ, ಮಲ್ಲು ಚಲವಾದಿ, ಶಿವಕುಮಾರ ಪೂಜಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳ ರಕ್ಷಣೆಗೆ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಕಾಮೆಂಟ್‌ಗಳು