‘ಕುಂದದ ಕುಕಿಲು’ ಕೃತಿ ಬಿಡುಗಡ
ಬಾಗಲಕೋಟೆ: ರಾಜಶೇಖರ ಕುಕ್ಕುಂದ ಅವರ ಪದ್ಯಗಳು ಲಯಬದ್ಧತೆ, ನಾದಮಯತೆ ಹಾಗೂ ಕನ್ನಡ ಭಾಷೆಯ ಸೊಗಡಿನಿಂದ ಕೂಡಿದ್ದು, ಅವರ ಕೃತಿಗಳಲ್ಲಿ ಭಾಷಾ ಸೌಂದರ್ಯ ಅನಾವರಣಗೊಂಡಿದೆ ಎಂದು ಸಾಹಿತಿ ಬಸು ಬೇವಿನಗಿಡದ ಹೇಳಿದರು.
ನಗರದ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ, ಗೌರವಾಭಿನಂದನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಡಾ. ವಿನಾಯಕ ಕಮತದ ಅವರ ಸಂಪಾದಕತ್ವದ ‘ಕುಂದದ ಕುಕಿಲು’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಜಶೇಖರ ಕುಕ್ಕುಂದ ಅವರು ತಮ್ಮ ಕವಿತೆಗಳಲ್ಲಿ ಸಹಜವಾದ ಪ್ರಾಸಗಳನ್ನು ಬಳಸುವ ಮೂಲಕ ಬದುಕಿನ ಅನುಭವಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ‘ಕುಂದದ ಕುಕಿಲು’ ಕೃತಿಯು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಮಹತ್ವದ ಕೊಡುಗೆಯನ್ನು ಪರಿಚಯಿಸುತ್ತದೆ. ಅವರ ಪದ್ಯಗಳು ರುಚಿಕಟ್ಟಾಗಿದ್ದು, ಕನ್ನಡ ಭಾಷೆಯ ಸೊಬಗನ್ನು ಸಾರುತ್ತವೆ. ಮಕ್ಕಳು ಹಾಗೂ ಹಿರಿಯರ ನಡುವಿನ ವಾತ್ಸಲ್ಯ, ಧ್ವನಿ ಚಮತ್ಕಾರ, ಕುಟುಂಬ ಮತ್ತು ಸಾಮಾಜಿಕ ಜೀವನದ ಮೌಲ್ಯಗಳನ್ನು ಅವರ ಪದ್ಯಗಳು ಮನೋಜ್ಞವಾಗಿ ಕಟ್ಟಿಕೊಡುತ್ತವೆ. ಮಕ್ಕಳಲ್ಲಿ ಕಂಡುಬರುವ ಕೀಳರಿಮೆಯಂತಹ ಸಮಸ್ಯೆಗಳ ಕುರಿತು ಇನ್ನಷ್ಟು ಮಕ್ಕಳ ಸಾಹಿತ್ಯ ಸೃಷ್ಟಿಯಾಗಬೇಕಿದೆ ಎಂದು ಬೇವಿನಗಿಡದ ಅಭಿಪ್ರಾಯಪಟ್ಟರು.
ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ) ಮಾತನಾಡಿ, ಡಾ. ಶಿವರಾಮ ಕಾರಂತರು ಮಕ್ಕಳ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಪದ್ಯಗಳನ್ನು ಓದಿಯೇ ತಾವು ಬರವಣಿಗೆಗೆ ಪ್ರೇರಣೆ ಪಡೆದಿದ್ದಾಗಿ ತಿಳಿಸಿದರು. ರಾಜಶೇಖರ ಕುಕ್ಕುಂದ ಅವರು ಮುಂದೆಯೂ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಇನ್ನಷ್ಟು ಮೌಲಿಕ ಕೊಡುಗೆಗಳನ್ನು ನೀಡಲಿ ಎಂದು ಹಾರೈಸಿದರು.
ಅತಿಥಿಯಾಗಿ ಮಾತನಾಡಿದ ಮಲ್ಲಿಕಾರ್ಜುನ ಶೆಲ್ಲಿಕೇರಿ, ಮಕ್ಕಳ ಸಾಹಿತ್ಯದಲ್ಲಿ ಹಲವು ಪ್ರಕಾರಗಳಿದ್ದು, ರಾಜಶೇಖರ ಕುಕ್ಕುಂದ ಅವರು ಮುಖ್ಯವಾಗಿ ಕಾವ್ಯ ಪ್ರಕಾರದಲ್ಲಿ ಹೆಚ್ಚಿನ ಸಾಹಿತ್ಯ ರಚಿಸಿದ್ದಾರೆ. ಅವರ ಪದ್ಯಗಳ ಪ್ರಮುಖ ಗುಣ ಸರಳತೆ ಹಾಗೂ ಮಕ್ಕಳ ಮನಸ್ಸನ್ನು ತಟ್ಟುವ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಆರ್. ಹಿರೇಮಠ ವಹಿಸಿದ್ದರು. ಕನ್ನಡ ಸಲಹಾ ಮಂಡಳಿಯ ಸದಸ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಡಾ. ರೇಣುಕಾ ಪ್ರಸಾದ್, ಗಿರೀಶ್ ಸೊಲ್ಲಾಪುರ, ರಾಜಕುಮಾರ ಕುಲಕರ್ಣಿ, ಮಂಡಲಗಿರಿ ಪ್ರಸನ್ನ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಚಿತ್ರ ಶೀರ್ಷಿಕೆ: ಬಾಗಲಕೋಟೆಯ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ. ವಿನಾಯಕ ಕಮತದ ಅವರ ಸಂಪಾದಕತ್ವದ ‘ಕುಂದದ ಕುಕಿಲು’ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ