RSS ದೇಶಭಕ್ತ ಸಂಘಟನೆ, ಪಾಕಿಸ್ತಾನ ಕಾಂಗ್ರೆಸ್‌ನ 'ಪಾಪದ ಕೂಸು': ಸಿ.ಟಿ. ರವಿ ವಾಗ್ದಾಳಿ
ಬಾಗಲಕೋಟೆ: RSS ಕುರಿತು ಟೀಕೆ ಮಾಡುವ ಬದಲು ದೇಶಕ್ಕೆ ಹಾನಿ ಮಾಡುವ ಸಂಘಟನೆಗಳ ಬಗ್ಗೆ ಮಾತನಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಹಿಂದೆಯೂ ಪಥಸಂಚಲನಕ್ಕೆ ಅನುಮತಿ ಪಡೆದೇ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಅನುಮತಿ ಇಲ್ಲದೆ ಪಥಸಂಚಲನ ನಡೆಸಿರುವ ಉದಾಹರಣೆ ಇಲ್ಲ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ವಿವೇಚನೆ ಜನರಿಗೆ ಬರಬೇಕು. ದೇಶಕ್ಕೆ ಒಳ್ಳೆಯದು ಮಾಡುವ ಸಂಘಟನೆ ಯಾವುದು, ದೇಶಕ್ಕೆ ಹಾನಿ ಮಾಡುವ ಸಂಘಟನೆ ಯಾವುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಹೇಳಿದರು.
"RSS ದೇಶಭಕ್ತ ಸಂಘಟನೆ. ಆದರೆ ಕಾಂಗ್ರೆಸ್ ನಾಯಕರು ದೇಶಕ್ಕೆ ಹಾನಿ ಮಾಡುವ ಸಂಘಟನೆಗಳ ಬಗ್ಗೆ ಒಂದು ಮಾತೂ ಆಡದೆ ಪ್ರತಿದಿನ RSS ಅನ್ನು ಟೀಕಿಸುತ್ತಿದ್ದಾರೆ. ಅದರಿಂದ ಅವರಿಗೆ ಪ್ರಚಾರ ಸಿಗುತ್ತದೆ ಎಂದು ಭಾವಿಸಿದ್ದರೆ, ಪ್ರಚಾರ ಪಡೆದುಕೊಳ್ಳಲಿ" ಎಂದು ವ್ಯಂಗ್ಯವಾಡಿದರು.
ಪಾಕಿಸ್ತಾನ ಕುರಿತು ಮಾತನಾಡಿದ ಅವರು, "ಪಾಕಿಸ್ತಾನ ಕಾಂಗ್ರೆಸ್‌ನ ಪಾಪದ ಕೂಸು. ದೇಶ ವಿಭಜನೆ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ, ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ನಡುವೆ ಒಪ್ಪಂದ ನಡೆದಿತ್ತು. ಆದ್ದರಿಂದಲೇ ಪಾಕಿಸ್ತಾನ ಕಾಂಗ್ರೆಸ್‌ನ ಪಾಪದ ಕೂಸು ಎಂದು ಹೇಳುತ್ತಿದ್ದೇವೆ" ಎಂದು ಹೇಳಿದರು.
ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, "ಬಿಜೆಪಿಯನ್ನು ಅಥವಾ ಸಂಘವನ್ನು ಟೀಕಿಸದೆ ಇದ್ದರೆ ಅವರಿಗೆ ನಿದ್ದೆ ಬರುವುದಿಲ್ಲ. ಬಿಜೆಪಿ ಹಾಗೂ ಸಂಘದ ವಿರುದ್ಧ ಟೀಕೆ ಮಾಡುವುದೇ ಅವರ ಕೆಲಸವಾಗಿದೆ" ಎಂದು ಆರೋಪಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ