ಇಳಕಲ್ಲ ಗ್ರಾಮೀಣ ಪೊಲೀಸರ ಕಾರ್ಯಾಚರಣೆ
ಕಳ್ಳತನವಾಗಿದ್ದ 18 ಆಡು-ಟಗರು ಹಾಗೂ 14 ಮೊಬೈಲ್‌ಗಳು ಪತ್ತೆ
ಇಳಕಲ್ಲ: ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ ಸುಮಾರು ₹3.86 ಲಕ್ಷ ಮೌಲ್ಯದ 18 ಆಡು-ಟಗರು ಹಾಗೂ 14 ಮೊಬೈಲ್‌ಗಳನ್ನು ಪತ್ತೆಹಚ್ಚಿ, ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ತಾಲೂಕಿನ ಸೋಮಲಾಪುರ ಗ್ರಾಮದ ನಾಗಪ್ಪ ವೀರಭದ್ರಪ್ಪ ಚಲವಾದಿ ಹಾಗೂ ಕೋಡಿಹಾಳ ಗ್ರಾಮದ ಶರೀಫ್ ಚಿತ್ತುಸಾಬ ಶೇಖದಾರ ಅವರು ತಮ್ಮ ಆಡು-ಟಗರುಗಳು ಕಳ್ಳತನವಾಗಿರುವ ಕುರಿತು ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸೋಮಲಾಪುರ ಮತ್ತು ಕೋಡಿಹಾಳ ಗ್ರಾಮಗಳಲ್ಲಿ ಒಟ್ಟು 18 ಆಡು-ಟಗರುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರು ಸೋಮಲಾಪುರ ಗ್ರಾಮದ ನಾಗಪ್ಪ ವೀರಭದ್ರಪ್ಪ ಚಲವಾದಿ ಅವರಿಗೆ ಸೇರಿದ ₹1.66 ಲಕ್ಷ ಮೌಲ್ಯದ 11 ಆಡು-ಟಗರು ಹಾಗೂ ಕೋಡಿಹಾಳ ಗ್ರಾಮದ ಶರೀಫ್ ಚಿತ್ತುಸಾಬ ಶೇಖದಾರ ಅವರಿಗೆ ಸೇರಿದ ₹1.20 ಲಕ್ಷ ಮೌಲ್ಯದ 7 ಆಡು-ಟಗರುಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಇದೇ ವೇಳೆ ಇಳಕಲ್ಲ ಗ್ರಾಮೀಣ ಭಾಗದಲ್ಲಿ ಕಳ್ಳತನವಾಗಿದ್ದ ಮೊಬೈಲ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಿ 14 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆಯಾದ ಮೊಬೈಲ್‌ಗಳನ್ನು ಹುನಗುಂದ ಡಿವೈಎಸ್‌ಪಿ ಸಂತೋಷ ಬನ್ನಟ್ಟಿ ಅವರು ಕಳೆದುಕೊಂಡಿದ್ದ ಮಾಲೀಕರಿಗೆ ಹಸ್ತಾಂತರಿಸಿದರು.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ. ಹಾಗೂ ಹುನಗುಂದ ಉಪವಿಭಾಗದ ಡಿವೈಎಸ್‌ಪಿ ಸಂತೋಷ ಬನ್ನಟ್ಟಿ ಅವರ ಮಾರ್ಗದರ್ಶನದಲ್ಲಿ ಹುನಗುಂದ ಸಿಪಿಐ ಎಸ್.ಬಿ. ಅಜೂರ ನೇತೃತ್ವದಲ್ಲಿ ಪಿಎಸ್‌ಐ ಎಸ್.ಆರ್. ನಾಯಕ್, ಮಲ್ಲಿಕಾರ್ಜುನ ಸತ್ತಿಗೌಡರ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಾಚರಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ