ಕೆನರಾ ಬ್ಯಾಂಕ್‌ನಿಂದ 180ಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿ ಬಾಲಕಿಯರಿಗೆ ₹7.20 ಲಕ್ಷ ವಿದ್ಯಾರ್ಥಿವೇತನ

ಕೆನರಾ ಬ್ಯಾಂಕ್‌ನಿಂದ 180ಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿ ಬಾಲಕಿಯರಿಗೆ ₹7.20 ಲಕ್ಷ ವಿದ್ಯಾರ್ಥಿವೇತನ

ಬಾಗಲಕೋಟೆ: ಕೆನರಾ ಬ್ಯಾಂಕ್‌ನ ರಾಷ್ಟ್ರವ್ಯಾಪಿ ಸಿಎಸ್‌ಆರ್ ಯೋಜನೆಯಾದ **‘ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾ ಜ್ಯೋತಿ ವಿದ್ಯಾರ್ಥಿವೇತನ ಯೋಜನೆ’**ಯಡಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 180ಕ್ಕೂ ಹೆಚ್ಚು ಎಸ್‌ಸಿ ಹಾಗೂ ಎಸ್‌ಟಿ ಪ್ರತಿಭಾವಂತ ಬಾಲಕಿಯರಿಗೆ ₹7.20 ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು.

ಜಿಲ್ಲೆಯ 20ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ 5ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ, ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿವೇತನದ ಮೊತ್ತವನ್ನು ವಿದ್ಯಾರ್ಥಿನಿಯರ ಉಳಿತಾಯ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ.

ಯೋಜನೆಯಡಿ 5ರಿಂದ 7ನೇ ತರಗತಿಯ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹3,000 ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹5,000 ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಯೋಗೇಶ್ ಪೂಜಾರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜ್‌ಕುಮಾರ್ ಹೂಗಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು.

ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು.

ಕಾಮೆಂಟ್‌ಗಳು