ಜಿಲ್ಲೆಯ 60 ಸರಕಾರಿ ಶಾಲೆಗಳ ಅಭಿವೃದ್ದಿಗೆ ಕ್ರಮ : ಡಿಸಿ ಸಂಗಪ್ಪ*

 *ಸರಕಾರಿ ಶಾಲೆಗಳ ಮೇಲ್ದರ್ಜೆಗೇರಿಸಲು ಉದ್ಯಮಿಗಳ ಸಹಭಾಗಿತ್ವಕ್ಕೆ ಡಿಸಿ ಕರೆ*

ಬಾಗಲಕೋಟೆ : ಆಗಸ್ಟ 07 : ಸರಕಾರಿ ಶಾಲೆಗಳ ಗುಣಮಟ್ಟದ ಅಭಿವೃದ್ದಿಗೆ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಸಿಸಿಎಸ್‍ಆರ್ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜಿಲ್ಲೆಯ 60 ಸರಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.


          ಜಿಲ್ಲಾ ಪಂಚಾಯತ ಸಭಾಭವನದಲ್ಲಿ  ಜಿಲ್ಲೆಯ 60 ಶಾಲೆಗಳ ಅಭಿವೃದ್ದಿ ಕುರಿತು ಕೈಗಾರಿಕಾ ಉದ್ಯಮಿಗಳೊಂದಿಗೆ ನಡೆದ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯ ಸರಕಾರವು ಹೊರಡಿಸಿರುವ ಆದೇಶದಂತೆ ಸಿಸಿಎಸ್‍ಆರ್‍ದಡಿ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಅಭಿವೃದ್ದಿಗೆ ಉದ್ಯಮಗಳ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಆಯ್ಕೆಯಾದ ಶಾಲೆಗಳನ್ನು ಹಂತ ಹಂತವಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಅಭಿವೃದ್ದಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. 

           ಶಾಲೆಗಳಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ, ಸುಸಜ್ಜಿತ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ಸ್ಮಾರ್ಟ ಕ್ಲಾಸ್‍ಗಳು, ಡಿಜಿಟಲ್ ಶಿಕ್ಷಣ ಸೌಲಭ್ಯ, ವಿಜ್ಞಾನ ಮತ್ತು ಕಂಪ್ಯೂಟರ ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ ಅಭಿವೃದ್ದಿ, ಕಾಂಪೌಂಡ ನಿರ್ಮಾಣ, ದುರಸ್ಥಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶ ಹೊಂದಲಾಗಿದೆ. ಜಿಲ್ಲೆಯ ಕೈಗಾರಿಕೆಗಳು ಹಾಗೂ ವಿವಿಧ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಒಂದು ಅಥವಾ ಹೆಚ್ಚಿನ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿಪಡಿಸಬಹುದಾಗಿದೆ ಎಂದರು. 

         ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಮಾತನಾಡಿ ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು, ಶಾಲೆಯಿಂದ ಬಿಟ್ಟು ಹೋಗುವ ಮಕ್ಕಳ ಪ್ರಮಾಣ ಕಡಿಮೆ ಮಾಡುವುದು ಹಾಗೂ ಸರ್ಕಾರಿ ಶಾಲೆಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸರಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಅಂತಹ ಶಾಲೆಗಳನ್ನು ಅಭಿವೃದ್ದಿಪಡಿಸಿದಲ್ಲಿ ಇಂದಿನ ಜನರೇಷನ್ ಮಕ್ಕಳಿಗೆ ಅನುಗುಣವಾಗಿ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಉತ್ತಮ ಮಾದರಿಯನ್ನು ರೂಪಿಸಲು ಎಲ್ಲ ಉದ್ಯಮಗಳು ಸಕ್ರಿಯವಾಗಿ ಕೈಜೋಡಿಸಲು ತಿಳಿಸಿದರು. 

           ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜೀತ್ ಮನ್ನಿಕೇರಿ ಅವರು ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸಭೆಗೆ ನೀಡಿದರು. 1 ರಿಂದ 12ನೇ ತರಗತಿವರೆಗೆ ಒಂದೇ ಸೂರಿನಡಿ ಶಿಕ್ಷಣ ದೊರೆಯುವಂತೆ ಮಾಡುವ ಉದ್ದೇಶ ಸರಕಾರದ್ದಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ 60 ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸರಕಾರ ಆದೇಶಿಸಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ 11, ಬಾಗಲಕೋಟೆ ತಾಲೂಕಿನಲ್ಲಿ 9, ಬೀಳಗಿ 6, ಹುನಗುಂದ 14, ಜಮಖಂಡಿ ತಾಲೂಕಿನಲ್ಲಿ 13 ಹಾಗೂ ಮುಧೋಳ ತಾಲೂಕಿನಲ್ಲಿ 7 ಶಾಲೆಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ತಿಳಿಸಿದರು. 

           ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಮಾತನಾಡಿ ಜಿಲ್ಲೆಯ ಕೈಗಾರಿಕೆಗಳು ತಮ್ಮ ಸಿಸಿಎಸ್‍ಆರ್ ನಿಧಿಯಡಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ದತ್ತು ಪಡೆದುಕೊಂಡು ಶಾಲೆಗಳನ್ನು ದತ್ತು ಪಡೆದು 3 ರಿಂದ 5 ವರ್ಷದ ಅವಧಿಯಲ್ಲಿ ಅಭಿವೃದ್ದಿಪಡಿಸಿದಲ್ಲಿ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ನಗರ ಪ್ರದೇಶಗಳ ಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

            ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ಶಿಕ್ಷಣ ಇಲಾಖೆಯ ಉಪಸಮನ್ವಯಾಧಿಕಾರಿ ಪ್ರಮೋದಿನಿ ಹಾಗೂ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ 21 ಕೈಗಾರಿಕೆಗಳ ಮಾಲಿಕರು ಹಾಗೂ ಪ್ರನಿಧಿತಳು ಉಪಸ್ಥಿತರಿದ್ದರು.


ಕಾಮೆಂಟ್‌ಗಳು