ಬಾಗಲಕೋಟೆ ಜಿಲ್ಲೆಯಲ್ಲಿ ಬರ ಪರಿಸ್ಥಿತಿ: ಶೀಘ್ರ ಸರ್ಕಾರಕ್ಕೆ ವರದಿ – ಸಚಿವ ವಿಜಯಾನಂದ ಕಾಶಪ್ಪನವರ
ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.
ಬಾಗಲಕೋಟೆಯ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಸರಾಸರಿ ಮಳೆ ಕೊರತೆ ಶೇಕಡ 19ರಷ್ಟಿದ್ದು, ಗುಳೇದಗುಡ್ಡ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಕೊರತೆ ದಾಖಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಸಭೆಗೆ ಮಾಹಿತಿ ನೀಡಿದರು. ಬಾಗಲಕೋಟೆ ಮತ್ತು ಬೀಳಗಿ ತಾಲೂಕುಗಳಲ್ಲಿ ಶೇಕಡ 10 ಹಾಗೂ ಹುನಗುಂದ ತಾಲೂಕಿನಲ್ಲಿ ಶೇಕಡ 5ರಷ್ಟು ಮಳೆ ಕೊರತೆಯಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಸುಮಾರು ಶೇಕಡ 90ರಷ್ಟು ಮುಂಗಾರು ಬಿತ್ತನೆ ಪೂರ್ಣಗೊಂಡಿದೆ. ಬೆಳೆಗಳ ಸ್ಥಿತಿ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಲಭ್ಯತೆ ಹಾಗೂ ಬೆಳೆಹಾನಿ ಬಗ್ಗೆಯೂ ಸಭೆಯಲ್ಲಿ ಪರಿಶೀಲಿಸಲಾಯಿತು.
ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಮೇವು ಬ್ಯಾಂಕ್‌ಗಳ ಸ್ಥಿತಿ ಹಾಗೂ ಏತ ನೀರಾವರಿ ಯೋಜನೆಗಳಿಗೆ ನೀರು ತುಂಬಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ 450 ಕೃಷಿ ಹೊಂಡಗಳ ನಿರ್ಮಾಣಕ್ಕೆ ಮೊದಲ ಹಂತದ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ