ಸಾಮೂಹಿಕವಾಗಿ ಮಾತ್ರೆ ನುಂಗಿಸುವ ಮೂಲಕ ಚಾಲನೆ

ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ

ಬಾಗಲಕೋಟೆ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ್ಲ ಅವರು ಮಕ್ಕಳಿಗೆ ಸಾಮೂಹಿಕವಾಗಿ ಅಲ್ಬೆಂಡಜೋಲ್ ಮಾತ್ರೆ ನುಂಗಿಸುವ ಮೂಲಕ ಚಾಲನೆ ನೀಡಿದರು.


ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ರಾಜಕುಮಾರ ಯರಗಲ್ಲ, ಜಂತುಹುಳು ಸೋಂಕಿನಿಂದ ಮಕ್ಕಳ ಆರೋಗ್ಯ, ಪೌಷ್ಟಿಕತೆ ಹಾಗೂ ಬೆಳವಣಿಗೆಯ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

1ರಿಂದ 19 ವರ್ಷದೊಳಗಿನ ಮಕ್ಕಳಿಗೆ ನಿಗದಿತ ಪ್ರಮಾಣದಲ್ಲಿ ಅಲ್ಬೆಂಡಜೋಲ್ ಮಾತ್ರೆ ನೀಡುವ ಮೂಲಕ ಜಂತುಹುಳು ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲೆ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಮಕ್ಕಳಿಗೆ ಮಾತ್ರೆ ನೀಡಲಾಗುತ್ತಿದ್ದು, ಮಕ್ಕಳು ತಪ್ಪದೇ ಮಾತ್ರೆ ಸೇವಿಸುವಂತೆ ತಿಳಿಸಿದರು.

ಕಾರ್ಯಕ್ರಮದಿಂದ ಹೊರಗುಳಿದ ಮಕ್ಕಳಿಗೆ ಆಗಸ್ಟ್ 17ರಂದು ಮಾತ್ರೆ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಗಿರಿಜಾ ನಡುವಿನಮನಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕುಸುಮಾ ಮಾಸಗಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಶಿವನಗೌಡ ಪಾಟೀಲ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸೂರ್ಯವಂಶಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸರಸ್ವತಿ ಸೇರಿದಂತೆ ಡಾ. ಅಂಕಿತ, ಡಾ. ಸುಮಿತ್ರ ಹಾಗೂ ಕಾರ್ಯಕ್ರಮ ಸಂಯೋಜಕರು ಉಪಸ್ಥಿತರಿದ್ದರು.

ಛಾಯಾಚಿತ್ರ: ಲಗತ್ತಿಸಿದೆ (1ರಿಂದ 4)

ಕಾಮೆಂಟ್‌ಗಳು