ಬೀಳಗಿ ಬಸ್ ನಿಲ್ದಾಣಕ್ಕೆ ಡಿಸಿ ದಿಢೀರ್ ಭೇಟಿ! ಸ್ವಚ್ಛತೆ ಕೊರತೆ ಕಂಡು ಘಟಕ ವ್ಯವಸ್ಥಾಪಕರಿಗೆ ನೋಟಿಸ್

ಬೀಳಗಿ ಬಸ್ ನಿಲ್ದಾಣಕ್ಕೆ ಡಿಸಿ ದಿಢೀರ್ ಭೇಟಿ! ಸ್ವಚ್ಛತೆ ಕೊರತೆ ಕಂಡು ಘಟಕ ವ್ಯವಸ್ಥಾಪಕರಿಗೆ ನೋಟಿಸ್

ಬಾಗಲಕೋಟೆ: ಬೀಳಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕೊರತೆ ಹಾಗೂ ಅವ್ಯವಸ್ಥೆ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಅವರು ಘಟಕ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.


ಬೀಳಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಆವರಣದಲ್ಲಿ ಸಮರ್ಪಕ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದರು. ಸಾರ್ವಜನಿಕ ಸ್ಥಳವಾಗಿರುವ ಬಸ್ ನಿಲ್ದಾಣವನ್ನು ಸ್ವಚ್ಛ ಹಾಗೂ ಸುಸಜ್ಜಿತವಾಗಿ ನಿರ್ವಹಿಸಬೇಕಾದರೂ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ ಘಟಕ ವ್ಯವಸ್ಥಾಪಕರಿಗೆ ನೋಟಿಸ್ ನೀಡಿದರು.ಇದೇ ವೇಳೆ ಬಸ್ ನಿಲ್ದಾಣದ ಆವರಣದಲ್ಲಿರುವ ಹೋಟೆಲ್ ಹಾಗೂ ಅಂಗಡಿಗಳಲ್ಲಿಯೂ ಸ್ವಚ್ಛತೆ ಕೊರತೆ ಕಂಡುಬಂದಿದೆ. ಕೆಲವು ಕಡೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಕರಿ ಅಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಹಾರ ಸುರಕ್ಷತೆ ಸಂಬಂಧಿತ ನಿಯಮಗಳ ಪಾಲನೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಬೀಳಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.


ಬಸ್ ನಿಲ್ದಾಣದ ಆವರಣವನ್ನು ತಕ್ಷಣ ಸ್ವಚ್ಛಗೊಳಿಸಬೇಕು. ಹೋಟೆಲ್ ಹಾಗೂ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಸಾರ್ವಜನಿಕರಿಗೆ ಉತ್ತಮ ಸೇವೆ ಹಾಗೂ ಸ್ವಚ್ಛ ವಾತಾವರಣ ಒದಗಿಸುವುದು ಬಸ್ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯಾಗಿದೆ. ಈ ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಮೇಲ್ವಿಚಾರಣೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಘಟಕ ವ್ಯವಸ್ಥಾಪಕರಿಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಭೇಟಿ ಸಂದರ್ಭದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಉಪಸ್ಥಿತರಿದ್ದರು.

ಪಡಿತರ ಗೋದಾಮಿಗೂ ಡಿಸಿ ಭೇಟಿ: ಬೀಳಗಿ ಟಿಎಪಿಸಿಎಂಎಸ್ ಗೋದಾಮಿಗೆ ಜಿಲ್ಲಾಧಿಕಾರಿ ಸಂಗಪ್ಪ ಭೇಟಿ ನೀಡಿ, ಪ್ರಸಕ್ತ ತಿಂಗಳಿಗೆ ಬಿಡುಗಡೆಯಾದ ಪಡಿತರ ಧಾನ್ಯಗಳ ಎತ್ತುವಳಿ ಹಾಗೂ ಬಿಲ್ಲುಗಳನ್ನು ಪರಿಶೀಲಿಸಿದರು. ಆಹಾರ ಧಾನ್ಯಗಳ ಲಭ್ಯತೆ ಹಾಗೂ ವಿತರಣೆಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಉಪಸ್ಥಿತರಿದ್ದರು.


ಕಾಮೆಂಟ್‌ಗಳು