ಎಚ್.ವೈ. ಮೇಟಿ ಹೆಸರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮನವಿ
ಬಾಗಲಕೋಟೆ: ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಗೆ ದಿವಂಗತ ಶಾಸಕ, ಮಾಜಿ ಸಚಿವ ಎಚ್.ವೈ. ಮೇಟಿಯವರ ಹೆಸರನ್ನು ನಾಮಕರಣ ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಎಸ್. ಹದ್ಲಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅವರಿಗೆ ಮನವಿ ಸಲ್ಲಿಸಲಾಯಿತು.
ಬಾಗಲಕೋಟೆ ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆ ಸಾಕಾರಗೊಳ್ಳುತ್ತಿರುವುದು ಜಿಲ್ಲೆಯ ಜನತೆಗೆ ಸಂತೋಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಈ ಮಹತ್ವದ ಯೋಜನೆಗೆ ದಿವಂಗತ ಎಚ್.ವೈ. ಮೇಟಿಯವರು ಅಪಾರ ಕಾಳಜಿ ವಹಿಸಿ, ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದ್ದರು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬಾಗಲಕೋಟೆಯ ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯಬೇಕು ಮತ್ತು ಜಿಲ್ಲೆಯ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕು ಎಂಬುದು ಎಚ್.ವೈ. ಮೇಟಿಯವರ ಬಹುದಿನಗಳ ಕನಸಾಗಿತ್ತು. ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಕುರಿತು ಅವರು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ನಿರಂತರವಾಗಿ ಚರ್ಚಿಸಿ ಯೋಜನೆಗೆ ವೇಗ ದೊರಕುವಂತೆ ಶ್ರಮಿಸಿದ್ದರು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯ ಹಿಂದೆ ದಿವಂಗತ ಎಚ್.ವೈ. ಮೇಟಿಯವರ ಪ್ರಯತ್ನ ಮಹತ್ವದ್ದಾಗಿದೆ ಎಂದು ಸಾರ್ವಜನಿಕವಾಗಿ ಸ್ಮರಿಸಿರುವುದನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಶಾಸಕರಾಗಿ, ಸಚಿವರಾಗಿ ಹಾಗೂ ಜನಪ್ರತಿನಿಧಿಯಾಗಿ ಎಚ್.ವೈ. ಮೇಟಿಯವರು ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ಹಲವು ದಶಕಗಳ ಕಾಲ ಕೊಡುಗೆ ನೀಡಿದ್ದಾರೆ. ಅವರ ಸಾರ್ವಜನಿಕ ಸೇವೆ ಹಾಗೂ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯ ಕನಸು ಮತ್ತು ಪ್ರಯತ್ನವನ್ನು ಶಾಶ್ವತವಾಗಿ ಸ್ಮರಿಸುವ ಉದ್ದೇಶದಿಂದ “ದಿವಂಗತ ಸನ್ಮಾನ್ಯ ಶ್ರೀ ಎಚ್.ವೈ. ಮೇಟಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಾಗಲಕೋಟೆ” ಎಂದು ನಾಮಕರಣ ಮಾಡುವಂತೆ ಮನವಿ ಮಾಡಲಾಗಿದೆ.
ಇದು ಕೇವಲ ಒಬ್ಬ ಜನಪ್ರತಿನಿಧಿಗೆ ನೀಡುವ ಗೌರವವಲ್ಲ. ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಹಿರಿಯ ನಾಯಕನ ಸೇವೆಯನ್ನು ಮುಂದಿನ ಪೀಳಿಗೆಗಳಿಗೆ ಪರಿಚಯಿಸುವ ಶಾಶ್ವತ ಸ್ಮರಣೆಯಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಕಾಶ ತಪಶೆಟ್ಟಿ, ದ್ಯಾಮಣ್ಣ ಗಾಳಿ, ರಾಜು ಮನ್ನಿಕೇರಿ, ಚಂದ್ರಶೇಖರ ರಾಠೋಡ, ಹನುಮಂತ ರಾಕುಂಪಿ, ಅಕ್ಬರ ಮುಲ್ಲಾ, ಎಸ್.ಎನ್. ರಾಮಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ