ಸ್ವಾತಂತ್ರ್ಯವನ್ನು ಪರಿಪೂರ್ಣಗೊಳಿಸಿದ ಅಂದಿನ ಸೇನಾನಿಗಳ ತ್ಯಾಗ, ಇಂದಿನ ಯೋಧರ ಕಾವಲು

 ಸ್ವಾತಂತ್ರ್ಯವನ್ನು ಪರಿಪೂರ್ಣಗೊಳಿಸಿದ ಅಂದಿನ ಸೇನಾನಿಗಳ ತ್ಯಾಗ, ಇಂದಿನ ಯೋಧರ ಕಾವಲು

ಬಾಗಲಕೋಟೆ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ದೇಶದ ಗಡಿಯಲ್ಲಿ ಭಾರತೀಯ ಸೈನಿಕರು ನಡೆಸುತ್ತಿರುವ ನಿರಂತರ ಕಾವಲಿನಿಂದ ಭಾರತದ ಸ್ವಾತಂತ್ರ್ಯ ಪರಿಪೂರ್ಣಗೊಂಡಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.



ನಗರದ ಕಾರಹಳ್ಳಿಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶ್ರೀ ಶರಣಬಸವ ಆಶ್ರಮದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಗಲಕೋಟೆ ಜಿಲ್ಲೆಯ ಹಲಗಲಿಯ ಬೇಡರು ಬ್ರಿಟಿಷರಿಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸದೆ ವೀರಾವೇಶದಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದ್ದರು. ವಿಜಯಪುರ ಜಿಲ್ಲೆಯ ಮಸಬಿನಾಳ ಸೇರಿದಂತೆ ಹಲವು ಗ್ರಾಮಗಳು ಸ್ವಾತಂತ್ರ್ಯ ಹೋರಾಟಕ್ಕೆ ನೂರಾರು ದೇಶಭಕ್ತರನ್ನು ನೀಡಿವೆ. ಶ್ರೀನಿವಾಸರಾವ್ ಕೌಜಲಗಿ, ಹರ್ಡೇಕರ್ ಮಂಜಪ್ಪ, ಗಂಗಾಧರರಾವ್ ದೇಶಪಾಂಡೆ ಅವರಂತಹ ಗಣ್ಯರ ಮಾರ್ಗದರ್ಶನದಲ್ಲಿ ಈ ಭಾಗದ ಯುವಕರು ಹೋರಾಟದಲ್ಲಿ ತೊಡಗಿದ್ದರು. ಖಾದಿ ಕ್ರಾಂತಿಯಲ್ಲಿ ಶ್ರೀಮತಿ ಉಮಾಬಾಯಿ ಅವರ ನೇತೃತ್ವದಲ್ಲಿ ಸಹಸ್ರಾರು ಮಹಿಳೆಯರು ಭಾಗವಹಿಸಿದ್ದರು ಎಂದು ಸ್ಮರಿಸಿದರು.

ಇಂದು ಸಿಯಾಚಿನ್‌ನ ಹಿಮಚ್ಛಾದಿತ ಪ್ರದೇಶದಿಂದ ಮರುಭೂಮಿಯ ರಣಬಿಸಿಲಿನವರೆಗೆ ಹಾಗೂ ಭೀಕರ ಕಾಡು ಪ್ರದೇಶಗಳಲ್ಲಿ ಭಾರತೀಯ ಸೈನಿಕರು ಹಗಲಿರುಳು ದೇಶದ ಗಡಿಯನ್ನು ಕಾಯುತ್ತಿದ್ದಾರೆ. ಶತ್ರುಪಡೆಗಳ ಆಕ್ರಮಣ ಮತ್ತು ಭಯೋತ್ಪಾದನೆಯ ಸವಾಲುಗಳ ನಡುವೆಯೂ ಸೈನಿಕರು ದೇಶದ ಸುರಕ್ಷತೆಗಾಗಿ ತ್ಯಾಗ ಮಾಡುತ್ತಿದ್ದಾರೆ ಎಂದರು.

ಅಂದಿನ ಸ್ವಾತಂತ್ರ್ಯ ಸೇನಾನಿಗಳು ಬಿತ್ತಿದ ದೇಶಭಕ್ತಿಯ ಬೀಜವೇ ಇಂದಿನ ಸೈನಿಕರ ಶೌರ್ಯದಲ್ಲಿ ಪ್ರತಿಫಲಿಸುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹತ್ತು ಮಾಜಿ ಸೈನಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಪ್ರವಚನಕಾರ ಶ್ರೀ ಅಮರೇಶ್ವರ ಶಾಸ್ತ್ರಿಗಳು ಗುಡ್ಡಾಪುರದ ದಾನಮ್ಮ ದೇವಿಯ ಜೀವನ ದರ್ಶನ ಪ್ರವಚನ ಮಾಲಿಕೆಯಲ್ಲಿ ದಾನಮ್ಮ ಜನನ ಪೂರ್ವ ಸಂದರ್ಭ ಕುರಿತು ಪ್ರವಚನ ನೀಡಿದರು. ಶ್ರೀಕಾಂತ ದೇವರು ‘ನಾನಾರು’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಮಲ್ಲಿಕಾರ್ಜುನ ಕೋಲ್ಹಾರ ನಿರೂಪಿಸಿದರು. ಶಶಿಧರ ಹೀರೆಮಠ ಹಾಗೂ ಸುರೇಳ ಬಳ್ಳಾರಿ ವಚನ ಸಂಗೀತ ನಡೆಸಿಕೊಟ್ಟರು. ಶ್ರೀಪೀಠದ ಧರ್ಮದರ್ಶಿಗಳು ಹಾಗೂ ಅಕ್ಕನ ಬಳಗದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು