ಜೈವಿಕ ಇಂಧನ ಭವಿಷ್ಯದ ಪ್ರಮುಖ ಇಂಧನ ಮೂಲ – ಡಿ.ಎಲ್. ಕುಲಕರ್ಣಿ

ಜೈವಿಕ ಇಂಧನ ಭವಿಷ್ಯದ ಪ್ರಮುಖ ಇಂಧನ ಮೂಲ – ಡಿ.ಎಲ್. ಕುಲಕರ್ಣಿ

ಬಾಗಲಕೋಟೆ: ಜೈವಿಕ ಇಂಧನವು ಭವಿಷ್ಯದ ಪ್ರಮುಖ ಇಂಧನ ಮೂಲವಾಗಿದ್ದು, ದೇಶದಲ್ಲಿ ಇದರ ಉತ್ಪಾದನೆ, ಬಳಕೆ ಹಾಗೂ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಎ.ಸಿ.ಎಫ್. ಡಿ.ಎಲ್. ಕುಲಕರ್ಣಿ ಹೇಳಿದರು.



ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಾಹಿತಿ, ತಿಳುವಳಿಕೆ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಅರಣ್ಯ ಹಾಗೂ ಗಿಡಮರಗಳನ್ನು ಉಳಿಸಿ ಬೆಳೆಸಬೇಕು. ಬೇವು, ಹೊಂಗೆ ಸೇರಿದಂತೆ ಜೈವಿಕ ಇಂಧನ ನೀಡುವ ಸಸ್ಯಗಳನ್ನು ಬೆಳೆಸಿ, ಅವುಗಳಿಂದ ದೊರೆಯುವ ಉತ್ಪನ್ನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಡಾ. ಭಾರತಿ ಮೇಟಿ ಅವರು ಜೈವಿಕ ಇಂಧನ ಕುರಿತು ಉಪನ್ಯಾಸ ನೀಡಿ, ಕಲ್ಲಿದ್ದಲು ಹಾಗೂ ಪೆಟ್ರೋಲಿಯಂನಂತಹ ಸಾಂಪ್ರದಾಯಿಕ ಇಂಧನ ಸಂಪನ್ಮೂಲಗಳು ಸೀಮಿತವಾಗಿವೆ. ಹೀಗಾಗಿ ನವೀಕರಿಸಬಹುದಾದ ಜೈವಿಕ ಇಂಧನದ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದರು. ವಿದ್ಯಾಗಿರಿಯ ಬಿ.ವಿ.ವಿ.ಎಸ್. ಕಾಲೇಜಿನ ಪ್ರಾತ್ಯಕ್ಷಿಕಾ ಕೇಂದ್ರದಲ್ಲಿ ಜೈವಿಕ ಇಂಧನ ತಯಾರಿಕೆ ಹಾಗೂ ಬಳಕೆಯ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು.

ರೀಚ್ ಸಂಸ್ಥೆಯ ನಿರ್ದೇಶಕ ಜಿ.ಎನ್. ಸಿಂಹ ಮಾತನಾಡಿ, ಪ್ರತಿ ವರ್ಷ ಆಗಸ್ಟ್ 10ರಂದು ಅಂತರಾಷ್ಟ್ರೀಯ ಜೈವಿಕ ಇಂಧನ ದಿನ ಆಚರಿಸಲಾಗುತ್ತದೆ. ಇದರ ಅಂಗವಾಗಿ ಜೈವಿಕ ಇಂಧನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ವಪ್ನ ಕುಬಣ್ಣ ನಾಯಕ್, ಮುಖ್ಯಗುರು ಎಂ.ಎಸ್. ಹಿರೇಮಠ್ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಸುಧಾ ಚುಮ್ಮನಕಟ್ಟಿ ಆಯೋಜಿಸಿದ್ದರು. ಎಲ್.ಎಸ್. ಬೀಳಗಿ ನಿರೂಪಿಸಿದರು. ಐ.ಆರ್. ಸುರಪುರ ವಂದಿಸಿದರು.

ಕಾಮೆಂಟ್‌ಗಳು