ಬಾದಾಮಿ: ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಆಚರಿಸುವ ನಿಟ್ಟಿನಲ್ಲಿ ಬಾದಾಮಿ ನಗರ ಪೊಲೀಸ್ ಠಾಣೆಯಲ್ಲಿ ಪೂರ್ವಭಾವಿ ಶಾಂತಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಬಾದಾಮಿ ವಲಯದ ಸಿಪಿಐ ಕರಿಯಪ್ಪ ಬನ್ನೇ ಹಾಗೂ ಪಿಎಸ್ಐ ಹಣಮಂತ ನರಳೆ ವಹಿಸಿದ್ದರು. ಇದೇ ವೇಳೆ ಅಧಿಕಾರಿಗಳು ಮಾತನಾಡಿ, ಭಾರತೀಯ ಸಂಸ್ಕೃತಿಯ ಭಾವೈಕ್ಯತೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹಿಂದೂ-ಮುಸ್ಲಿಂ ಸಮುದಾಯದವರು ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯ ಮನೋಭಾವದಿಂದ ಹಬ್ಬವನ್ನು ಆಚರಿಸಬೇಕು ಎಂದು ಕರೆ ನೀಡಿದರು.
ದಿನಾಂಕ 26 ಆಗಸ್ಟ್ 2026 ರಂದು ನಡೆಯಲಿರುವ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಕೋಮು ಸೌಹಾರ್ದಕ್ಕೆ ಧಕ್ಕೆಯಾಗದಂತೆ, ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಶಾಂತಿ ಮತ್ತು ಸಹೋದರತ್ವದ ವಾತಾವರಣದಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು. ಮೆರವಣಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು, ಜನಪ್ರತಿನಿಧಿಗಳು, ಹಿರಿಯ ನಾಗರಿಕರು ಹಾಗೂ ಈದ್ ಮಿಲಾದ್ ಆಚರಣಾ ಸಮಿತಿಯ ಸದಸ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಆಚರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಿರಿಯರಾದ ರಾಜ್ ಮಹಮ್ಮದ್ ಭಾಗವಾನ್ ಇಲಿಯಾಸ್ ಜಮಾದಾರ್, ಜಮೀರ್ ನಾಯಕ್, ಎಂಎ ಖಲೀಫ ಸೇರಿದಂತೆ ಅನೇಕ ಮುಸ್ಲಿಂ ಬಾಂಧವರು ಹಾಗೂ ಹಿಂದೂ ಸಮಾಜದ ಮುಖಂಡರು, ಹಿರಿಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಸಭೆಯ ಅಂತ್ಯದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವದೊಂದಿಗೆ ಈದ್ ಮಿಲಾದ್ ಹಬ್ಬವನ್ನು ಆಚರಿಸುವ ಸಂಕಲ್ಪ ಕೈಗೊಂಡರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ