ಚಿಕ್ಕಲಕಿ ಏತ ನೀರಾವರಿ ಯೋಜನೆ ಒಂದು ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆ

 

ಚಿಕ್ಕಲಕಿ ಏತ ನೀರಾವರಿ ಯೋಜನೆ ಒಂದು ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆ

ಬಾಗಲಕೋಟೆ: ಕಳೆದ 13 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚಿಕ್ಕಲಕಿ–ತೊದಲಬಾಗಿ ಏತ ನೀರಾವರಿ ಯೋಜನೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಭರವಸೆ ನೀಡಿದ್ದಾರೆ.


ಚಿಕ್ಕಲಕಿ ಕ್ರಾಸ್‌ನಲ್ಲಿ ಯೋಜನೆಗಾಗಿ ರೈತರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು, ರೈತರ ಸಮಸ್ಯೆಗಳನ್ನು ಆಲಿಸಿದರು. ಯೋಜನೆ 13 ವರ್ಷಗಳಿಂದ ವಿಳಂಬವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಏತ ನೀರಾವರಿ ಕಾಮಗಾರಿಯನ್ನು ಖುದ್ದಾಗಿ ಪರಿಶೀಲಿಸುವುದಾಗಿಯೂ ಸಚಿವರು ತಿಳಿಸಿದರು. ಯೋಜನೆ ಪೂರ್ಣಗೊಳಿಸುವ ಭರವಸೆ ಹಿನ್ನೆಲೆಯಲ್ಲಿ ಧರಣಿಯನ್ನು ಅಂತ್ಯಗೊಳಿಸುವಂತೆ ರೈತರಲ್ಲಿ ಮನವಿ ಮಾಡಿದರು.

ಇದೇ ವೇಳೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಗುವುದು. ರೈತರಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ಸಚಿವರ ಭೇಟಿ ಸಂದರ್ಭದಲ್ಲಿ ಜಮಖಂಡಿ ತಹಸೀಲ್ದಾರ್, ಜಮಖಂಡಿ ಹಾಗೂ ಸಾವಳಗಿ ಕಂದಾಯ ನಿರೀಕ್ಷಕರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು