ವಚನ ಸಾಹಿತ್ಯ ಆಧುನಿಕ ಜಗತ್ತಿಗೂ ದಾರಿದೀಪ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ಬಾಗಲಕೋಟೆ: ವಚನ ಸಾಹಿತ್ಯವು ಕೇವಲ ಧಾರ್ಮಿಕ ಚೌಕಟ್ಟು ಅಥವಾ ದೇವತಾ ಸ್ತುತಿಗೆ ಸೀಮಿತವಾದ ಸಾಹಿತ್ಯ ಪ್ರಕಾರವಲ್ಲ. ಅದು ಬದುಕಿನ ಸರ್ವತೋಮುಖ ದರ್ಶನ, ವೈಜ್ಞಾನಿಕ ಚಿಂತನೆ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಇಂದಿಗೂ ದಾರಿದೀಪವಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶ್ರೀ ಶರಣಬಸವಾಶ್ರಮದ ವತಿಯಿಂದ ಆಯೋಜಿಸಿದ್ದ ಪಲ್ಲಕಿ ಉತ್ಸವದ ದಿವ್ಯ ನೇತೃತ್ವ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದ ಶರಣರು ಕಟ್ಟಿಕೊಟ್ಟ ವಚನ ಪರಂಪರೆಯು ಮಾನವ ಜೀವನದ ಪ್ರತಿಯೊಂದು ಆಯಾಮವನ್ನೂ ವೈಜ್ಞಾನಿಕ ಹಾಗೂ ಸಾಮಾಜಿಕ ದೃಷ್ಟಿಕೋನದಿಂದ ಸ್ಪರ್ಶಿಸುವ ಅದ್ಭುತ ಜೀವನ ದರ್ಶನವಾಗಿದೆ. ಭೌತಿಕ ಪ್ರಪಂಚದ ನಿಗೂಢ ರಹಸ್ಯಗಳಿಂದ ಹಿಡಿದು ವ್ಯಕ್ತಿಯ ಅಂತರಂಗದ ಶಾಂತಿಯವರೆಗೆ, ಸಾಮಾಜಿಕ ಸೌಹಾರ್ದತೆಯಿಂದ ವಿಜ್ಞಾನದ ತಳಹದಿಯವರೆಗೆ ವಚನಗಳ ಬೋಧನೆಗಳು ಬೆಳಕು ಚೆಲ್ಲುತ್ತವೆ. ಇವು ಆಧುನಿಕ ಜಗತ್ತಿಗೂ ದಾರಿದೀಪವಾಗಿವೆ ಎಂದರು.
ಶರಣರು ಮೂಢನಂಬಿಕೆಗಳು ಹಾಗೂ ಕಂದಾಚಾರಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ನಿಸರ್ಗದ ನಿಯಮಗಳು, ಪರಿಸರ ಸಮತೋಲನ ಹಾಗೂ ಶರೀರ ವಿಜ್ಞಾನದ ಕುರಿತು ವೈಜ್ಞಾನಿಕ ಒಳನೋಟ ಮತ್ತು ವೈಚಾರಿಕತೆಯ ಅಂಶಗಳು ವಚನಗಳಲ್ಲಿ ಕಾಣಸಿಗುತ್ತವೆ.
ಜಾತಿ, ಲಿಂಗ ಹಾಗೂ ವರ್ಗಭೇದಗಳಿಲ್ಲದ ಸಮಾನತೆಯ ಸಮಾಜ ನಿರ್ಮಾಣಕ್ಕೆ ವಚನಕಾರರು ಯುಗಪ್ರವರ್ತಕರಾಗಿ ತಳಹದಿ ಹಾಕಿದರು. ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ವಚನಗಳು ಕೇವಲ ಭೂತಕಾಲದ ನೆನಪುಗಳಲ್ಲ. ಅವು ವರ್ತಮಾನದ ಅಗತ್ಯ ಹಾಗೂ ಭವಿಷ್ಯದ ಆಶಾಕಿರಣ. ಸಮಾಜದ ಒಗ್ಗಟ್ಟು, ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಲು ವಚನಗಳ ಅಧ್ಯಯನ ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಶ್ರೀಗಳು ಹೇಳಿದರು.
ಕುಂಬಾರ ಗುರುಪೀಠದ ಬಸವ ಗುಂಡಯ್ಯ ಶ್ರೀಗಳು, ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಶ್ರೀಗಳು, ಭೋವಿ ಗುರುಪೀಠದ ಶ್ರೀಕಾಂತ ದೇವರು ಹಾಗೂ ಅಮರೇಶ್ವರ ಶಾಸ್ತ್ರೀಗಳ ಸಮ್ಮುಖದಲ್ಲಿ ಪಲ್ಲಕಿ ಉತ್ಸವ ನಡೆಯಿತು.
ಶ್ರೀ ಶರಣಬಸವಾಶ್ರಮದಿಂದ ಆರಂಭಗೊಂಡ ಪಲ್ಲಕಿ ಉತ್ಸವವು ಜಾನಪದ ಕಲಾತಂಡಗಳು ಹಾಗೂ ಪೂರ್ಣಕುಂಭ ಕಳಸಗಳೊಂದಿಗೆ ಕಾರೇಹಳ್ಳ, ವಿವೇಕಾನಂದ ನಗರ ಹಾಗೂ ಲೋಕೋಪಯೋಗಿ ವಸತಿನಿಲಯದ ಮೂಲಕ ಸಂಚರಿಸಿತು. ಶ್ರೀಪೀಠದ ಧರ್ಮದರ್ಶಿಗಳು, ಅಕ್ಕನ ಬಳಗದವರು ಹಾಗೂ ಗುರುಕುಲದ ವಿದ್ಯಾರ್ಥಿಗಳು ಜಾಥಾದೊಂದಿಗೆ ಹೆಜ್ಜೆ ಹಾಕಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ