ಮಹಿಳಾ ಸಮಾನತೆ: ಸಾಮಾಜಿಕ ಪರಿವರ್ತನೆಯಿಂದಲೇ ಸಾಧ್ಯ — ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಬಾಗಲಕೋಟೆ: ಸಮಾಜದಲ್ಲಿ ಮಹಿಳೆಗೆ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ಪರಿಪೂರ್ಣ ಸಮಾನತೆ ಸಾಧ್ಯ. ಸಾಮಾಜಿಕ ಪರಿವರ್ತನೆಯಿಂದಲೇ ನಿಜವಾದ ಮಹಿಳಾ ಸಮಾನತೆ ಸಾಕಾರಗೊಳ್ಳಲಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಹೇಳಿದರು.
ನಗರದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶ್ರೀ ಶರಣಬಸವಾಶ್ರಮದಲ್ಲಿ ನಡೆದ ಮಹಿಳಾ ಸಮಾನತೆ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತ್ಯಾಗದ ಬದುಕು ಮಹಿಳಾ ಸಮಾನತೆಗೆ ಆದರ್ಶವಾಗಿದೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿ, ಅನುಭವ ಮಂಟಪದ ಮೂಲಕ ಮಹಿಳೆಯರಿಗೆ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸಿದ್ದರು. ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣೆಯರು ಸಮಾಜದ ಮುನ್ನಡೆಗೆ ಕೊಡುಗೆ ನೀಡಿದರು ಎಂದು ಹೇಳಿದರು.
ಮಹಿಳೆಯರಿಗೆ ಆಸ್ತಿ ಹಕ್ಕು ಸೇರಿದಂತೆ ಸಮಾನ ಹಕ್ಕುಗಳನ್ನು ಕಲ್ಪಿಸುವ ಉದ್ದೇಶದಿಂದ ಅಂಬೇಡ್ಕರ್ ಅವರು ಹಿಂದು ಕೋಡ್ ಬಿಲ್ ಮಂಡಿಸಿದ್ದರು. ಅದು ಅಂಗೀಕಾರವಾಗದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಹಿಳಾ ಸಮಾನತೆಗಾಗಿ ಅಧಿಕಾರವನ್ನೇ ತ್ಯಜಿಸಿದ ಮಹನೀಯರ ಆಶಯವನ್ನು ಸಮಾಜ ಅರ್ಥೈಸಿಕೊಳ್ಳಬೇಕು ಎಂದರು.
ಕುಂಬಾರ ಗುರುಪೀಠದ ಬಸವ ಗುಂಡಯ್ಯ ಶ್ರೀಗಳು ಮಾತನಾಡಿ, “ಮಹಿಳೆ ಸಬಲಳಾದರೆ ಕುಟುಂಬ ಸಬಲವಾಗುತ್ತದೆ; ಕುಟುಂಬ ಸಬಲವಾದರೆ ಸಮಾಜ ಮತ್ತು ರಾಷ್ಟ್ರ ಬಲಿಷ್ಠವಾಗುತ್ತದೆ” ಎಂದರು. ಮಹಿಳಾ ಸಮಾನತೆ ಕೇವಲ ಮಹಿಳೆಯರ ಹೋರಾಟವಲ್ಲ, ಸಮಾನ ಹಾಗೂ ನ್ಯಾಯಯುತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕಾದ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಕೀಲರಾದ ಶ್ರೀಮತಿ ಶಿಲ್ಪಾ ಕೊಪ್ಪ ಮಾತನಾಡಿ, ಮಹಿಳೆಯರು ಯಾವುದೇ ಭಯ ಅಥವಾ ಹಿಂಜರಿಕೆ ಇಲ್ಲದೆ ದೊರೆಯುವ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕು. ಬಾಲ್ಯವಿವಾಹ ತಡೆ, ಪೋಕ್ಸೊ ಕಾಯ್ದೆ, ಬಾಲಕಾರ್ಮಿಕ ಪದ್ಧತಿ ತಡೆ ಹಾಗೂ ದೌರ್ಜನ್ಯಕ್ಕೊಳಗಾದ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದರು.
ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಖಿ ಒನ್ ಸ್ಟಾಪ್ ಸೆಂಟರ್ ಮೂಲಕ ಆಪ್ತಸಮಾಲೋಚನೆ, ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಪೊಲೀಸ್ ಸಹಾಯ ಹಾಗೂ ಅಗತ್ಯವಿದ್ದಲ್ಲಿ ತಾತ್ಕಾಲಿಕ ಆಶ್ರಯ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿವೆ ಎಂದರು.
ಉಪನ್ಯಾಸಕಿ ಶ್ರೀಮತಿ ರೇಖಾ ಮ್ಯಾಗೇರಿ ಮಾತನಾಡಿ, ಮಹಿಳಾ ಸಮಾನತೆ ಎಂದರೆ ಕೇವಲ ಕಾನೂನಿನಲ್ಲಿ ಹಕ್ಕು ನೀಡುವುದಲ್ಲ. ಕುಟುಂಬದಿಂದ ಸಮಾಜದವರೆಗೆ ಮಹಿಳೆಯನ್ನು ಸಮಾನ ಪಾಲುದಾರಳಾಗಿ ಗೌರವಿಸುವ ಮನೋಭಾವ ಬೆಳೆಸಬೇಕು. ಶಿಕ್ಷಣ ಹಾಗೂ ಆರ್ಥಿಕ ಸ್ವಾವಲಂಬನೆಯಿಂದ ಮಹಿಳೆಯರ ಸಬಲೀಕರಣ ಸಾಧ್ಯ ಎಂದರು.
ಶ್ರೀಮತಿ ಮಲ್ಲಿಕಾರ್ಜುನ ಕೋಲ್ಹಾರ ಮಾತನಾಡಿ, ಮಹಿಳೆಯರು ಅಡುಗೆಮನೆಯಿಂದ ಅಂತರಿಕ್ಷದವರೆಗೆ ಸಾಧನೆ ಮಾಡಿದ್ದಾರೆ. ಶಿಕ್ಷಣ, ವಿಜ್ಞಾನ, ಆಡಳಿತ, ರಾಜಕೀಯ, ಕ್ರೀಡೆ, ಕೃಷಿ, ಕಲೆ ಹಾಗೂ ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಇನ್ನಷ್ಟು ಪ್ರಾತಿನಿಧ್ಯ ದೊರೆಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಶ್ರೀಕಾಂತ ದೇವರು ಹಾಗೂ ಅಮರೇಶ್ವರ ಶಾಸ್ತ್ರೀಗಳು ಸಮ್ಮುಖವಹಿಸಿದ್ದರು. ಶ್ರೀಮತಿ ಮೀನಾಕ್ಷಿ ಬಟಕುರ್ಕಿ, ಶ್ರೀಮತಿ ರತ್ನಕ್ಕ ರುದ್ರಾಕ್ಷಿ, ಶ್ರೀಪೀಠದ ಧರ್ಮದರ್ಶಿಗಳು ಹಾಗೂ ಅಕ್ಕನ ಬಳಗದವರು ಉಪಸ್ಥಿತರಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ