ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ಕೆಲಸ ಮಾಡಲು ಬದ್ಧ: ಶಾಸಕ ಭೀಮಸೇನ ಚಿಮ್ಮನಕಟ್ಟಿ
ಬಾದಾಮಿ: ಐತಿಹಾಸಿಕ ಚಾಲುಕ್ಯರ ರಾಜಧಾನಿ ಹಾಗೂ ಪ್ರಸಿದ್ಧ ಪ್ರವಾಸಿ ತಾಣವಾದ ಬಾದಾಮಿ ನಗರಕ್ಕೆ ದೇಶ-ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬದ್ಧನಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ನಗರದ ಹಾಲಿ ಬಸ್ ನಿಲ್ದಾಣದ ಆವರಣದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ೧೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮದ ದೃಷ್ಟಿಯಿಂದ ಬಾದಾಮಿ ಮಹತ್ವದ ತಾಣವಾಗಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಹಾಗೂ ಪ್ರಯಾಣಿಕರಿಗೆ ಆಧುನಿಕ ಮತ್ತು ಗುಣಮಟ್ಟದ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹಳೆಯ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಅತ್ಯಾಧುನಿಕ ಮಾದರಿಯಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದರು.
ನೂತನ ಬಸ್ ನಿಲ್ದಾಣದ ನೆಲಮಹಡಿಯಲ್ಲಿ ಉಪಾಹಾರ ಗೃಹ, ಮಹಿಳೆಯರ ವಿಶ್ರಾಂತಿ ಕೊಠಡಿ, ಟಿಕೆಟ್ ಕೌಂಟರ್, ಎಟಿಎಂ, ವಾಣಿಜ್ಯ ಮಳಿಗೆಗಳು, ಆಡಳಿತ ಕಚೇರಿ, ಪ್ರತ್ಯೇಕ ಶೌಚಾಲಯಗಳು ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಮೊದಲ ಮಹಡಿಯಲ್ಲಿ ಸಿಬ್ಬಂದಿ ವಿಶ್ರಾಂತಿ ಕೊಠಡಿ, ಸಭಾಂಗಣ, ಮುಖ್ಯ ಸಂಚಾರ ನಿಯಂತ್ರಕರ ಕೊಠಡಿ, ವ್ಯವಸ್ಥಾಪಕರ ಕಚೇರಿ, ಪೊಲೀಸ್ ಔಟ್‌ಪೋಸ್ಟ್ ಹಾಗೂ ಉದ್ಯೋಗಿಗಳ ಲಾಕರ್ ವ್ಯವಸ್ಥೆ ಇರಲಿದೆ ಎಂದು ಯೋಜನೆಯ ವಿವರ ನೀಡಿದರು.
ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ಕ್ಷೇತ್ರದ ಜನರು ಮತ್ತು ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಒದಗಿಸುವುದು ತಮ್ಮ ಗುರಿಯಾಗಿದೆ ಎಂದು ಶಾಸಕ ಚಿಮ್ಮನಕಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಯ ಹಾಲು ಒಕ್ಕೂಟದ ನಿರ್ದೇಶಕ ಈರಣ್ಣ ಕರಿಗೌಡರ, ಮುಖಂಡ ಅಶೋಕ ಕೋಟನಕರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇವದಾಸ ಸೇರಿದಂತೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಹಿರೇಮಠ, ತಹಶೀಲ್ದಾರ್ ಎಸ್.ಎಫ್. ಬೊಮ್ಮನ್ನವರ, ತಾ.ಪಂ. ಇಒ ಸತೀಶ ಮಾಕೊಂಡ, ವಿವಿಧ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್
“ಬಾದಾಮಿ ಮತಕ್ಷೇತ್ರದ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಈಗಾಗಲೇ ಗ್ರಂಥಾಲಯ ಹಾಗೂ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಕೆರೂರ ಏತ ನೀರಾವರಿ ಯೋಜನೆ ಸೇರಿದಂತೆ ರೈತರ ಜಮೀನುಗಳಿಗೆ ನೀರಾವರಿ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.”
— ಭೀಮಸೇನ ಚಿಮ್ಮನಕಟ್ಟಿ, ಶಾಸಕ, ಬಾದಾಮಿ
“ಸರ್ಕಾರದ ಹಂತದಲ್ಲಿ ಹೆಚ್ಚಿನ ಅನುದಾನ ತಂದು, ಹೊಸ ಹೊಸ ಯೋಜನೆಗಳ ಮೂಲಕ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಐತಿಹಾಸಿಕ ಬಾದಾಮಿಯ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಯೋಜನೆಗಳನ್ನು ರೂಪಿಸುತ್ತಿದ್ದಾರೆ.”
— ಈರಣ್ಣ ಕರಿಗೌಡರ, ನಿರ್ದೇಶಕರು, ಅವಳಿ ಜಿಲ್ಲೆಯ ಹಾಲು ಒಕ್ಕೂಟ, ವಿಜಯಪುರ–ಬಾಗಲಕೋಟೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ