ಸತ್ಯದ ಮಾರ್ಗದಲ್ಲಿ ಸಾಗಿದರೆ ಸವಾಲುಗಳನ್ನು ಗೆಲ್ಲಬಹುದು: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ಬಾಗಲಕೋಟೆ: ಸತ್ಯದ ಮಾರ್ಗದಲ್ಲಿ ದೃಢವಾಗಿ ಸಾಗಿದರೆ ಜೀವನದ ಎಂತಹ ಸವಾಲುಗಳನ್ನಾದರೂ ಎದುರಿಸಿ ಅಂತಿಮ ಜಯ ಸಾಧಿಸಬಹುದು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಕಾರೇಹಳ್ಳದಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶ್ರೀ ಶರಣಬಸವ ಅಪ್ಪಂಗಳ ಆಶ್ರಮದಲ್ಲಿ ನಡೆಯುತ್ತಿರುವ ಶ್ರಾವಣ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸತ್ಯವೇ ದೇವರು, ದೇವರೇ ಸತ್ಯ. ಸತ್ಯದ ಶೋಧನೆ, ದೇವರ ಶೋಧನೆ ಹಾಗೂ ಆತ್ಮದ ಶೋಧನೆ ಎಲ್ಲವೂ ಒಂದೇ. ಧರ್ಮ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಕಷ್ಟ-ಕಾರ್ಪಣ್ಯಗಳು ಭಗವಂತ ಒಡ್ಡುವ ಪರೀಕ್ಷೆಗಳಾಗಿವೆ ಎಂದು ಸ್ವಾಮೀಜಿ ಹೇಳಿದರು.
ಸಮಾರಂಭದಲ್ಲಿ ಕುಂಬಾರ ಗುರುಪೀಠದ ಬಸವ ಗುಂಡಯ್ಯ ಶ್ರೀಗಳು, ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀಕಾಂತ ದೇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪ್ರವಚನಕಾರ ಶ್ರೀ ಅಮರೇಶ್ವರ ಶಾಸ್ತ್ರಿಗಳು ಗುಡ್ಡಾಪುರದ ದಾನಮ್ಮ ದೇವಿಯ ಜೀವನ ದರ್ಶನ ಕುರಿತು ಪ್ರವಚನ ಮಾಲಿಕೆ ಆರಂಭಿಸಿದರು. ಮಲ್ಲಿಕಾರ್ಜುನ ಕೋಲ್ಹಾರ ನಿರೂಪಿಸಿದರು. ಶಶಿಧರ ಹೀರೆಮಠ ಹಾಗೂ ಸುರೇಳ ಬಳ್ಳಾರಿ ವಚನ ಸಂಗೀತ ನಡೆಸಿಕೊಟ್ಟರು. ಶ್ರೀಪೀಠದ ಧರ್ಮದರ್ಶಿಗಳು ಹಾಗೂ ಅಕ್ಕನ ಬಳಗದವರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ