ಸಚಿವರ ಮೇಲೆ ಕೇಸ್ ಇದ್ದರೆ ಎಲ್ಲರೂ ರಾಜೀನಾಮೆ ಕೊಡಬೇಕಾ? ಸತೀಶ್ ಜಾರಕಿಹೊಳಿ ಪ್ರಶ್ನೆ

ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿದೆ, ರಾಜೀನಾಮೆ ಪ್ರಶ್ನೆಯೇ ಇಲ್ಲ: ಸತೀಶ್ ಜಾರಕಿಹೊಳಿ

ಜಮಖಂಡಿ: ಪ್ರಕರಣಗಳಿವೆ ಎಂಬ ಕಾರಣಕ್ಕೆ ಸಚಿವರು ರಾಜೀನಾಮೆ ನೀಡಬೇಕು ಎಂದಾದರೆ ದೇಶದಲ್ಲಿ ಯಾರೂ ಸಚಿವರಾಗಿ ಉಳಿಯುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

 ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.

 ಕೇಂದ್ರ ಸರ್ಕಾರದ ಸಚಿವರು ಸೇರಿದಂತೆ ವಿವಿಧ ರಾಜ್ಯಗಳ ಸಚಿವರ ಮೇಲೂ ಪ್ರಕರಣಗಳಿವೆ. ಪ್ರಕರಣಗಳಿರುವ ಎಲ್ಲರೂ ರಾಜೀನಾಮೆ ನೀಡಬೇಕು ಎಂದರೆ ಯಾರೂ ಸಚಿವರಾಗಲು ಸಾಧ್ಯವಿಲ್ಲ. ಈ ವಿಚಾರವನ್ನು ಕಾನೂನುಬದ್ಧವಾಗಿ ಹಾಗೂ ಪಕ್ಷದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದರು.

 ಸಚಿವ ನಾಗೇಂದ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಲೋಕಾಯುಕ್ತದಿಂದ ಕ್ಲೀನ್‌ಚಿಟ್ ನೀಡಲಾಗಿದೆ ಎಂಬುದು ಸರ್ಕಾರದ ವಾದ. ಹೀಗಾಗಿ ಈ ವಿಚಾರದಲ್ಲಿ ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

 ಇನ್ನು ಜಮಖಂಡಿ ಕ್ಷೇತ್ರದ ರಸ್ತೆ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಎಲ್ಲ ರಸ್ತೆಗಳ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದಲ್ಲ. ನಗರಸಭೆ, ನೀರಾವರಿ ಹಾಗೂ ಆರ್‌ಡಿಪಿಆರ್ ಇಲಾಖೆಗಳ ವ್ಯಾಪ್ತಿಗೆ ಬರುವ ರಸ್ತೆಗಳ ನಿರ್ವಹಣೆಯನ್ನು ಆಯಾ ಇಲಾಖೆಗಳೇ ಮಾಡಬೇಕು ಎಂದರು.ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಸಮಸ್ಯೆಗಳನ್ನು ಗಮನಕ್ಕೆ ತಂದರೆ ತಕ್ಷಣ ಪರಿಶೀಲಿಸಿ ಅಗತ್ಯವಿದ್ದಲ್ಲಿ ದುರಸ್ತಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

 .

ಕಾಮೆಂಟ್‌ಗಳು