ಕಾಲೇಜು ಆರಂಭದ ಅಂತಿಮ ತಯಾರಿ ಪರಿಶೀಲನೆ:100 ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ
ಮೂರು ವಿಭಾಗದಲ್ಲಿ ತರಗತಿ ನಡೆಸಲು ತಯಾರಿ: ಸೆ.21ರ ವರೆಗೆ 2ನೇ ಹಂತದ ಪ್ರವೇಶಾತಿ ಅಂತಿಮ
ಬಾಗಲಕೋಟೆ : ಜಿಲ್ಲೆಯ ಬಹು ದಿನಗಳ ಹಾಗೂ ಬಹು ಬೇಡಿಕೆಯ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಬೇಡಿಕೆ ಈಡೇರಿದ್ದು, ಬರಲಿರುವ ಅಕ್ಟೋಬರ್ 15ರಿಂದ ತರಗತಿ ಆರಂಭಿಸಲು ಎಲ್ಲ ತಯಾರಿ ನಡೆದಿವೆ ಎಂದು ಶಾಸಕ ಉಮೇಶ ಎಚ್. ಮೇಟಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನವನಗರ ಯೂನಿಟ್-1ರ ಸೆಕ್ಟರ್ ನಂ.1 ಮತ್ತು 13ರ ಸುಮಾರು 44 ಎಕರೆ ಭೂಮಿಯನ್ನು ಬಾಗಲಕೋಟೆ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸಿದ್ದು, ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸಧ್ಯ ಸ್ವಂತ ಕಟ್ಟಡ ನಿರ್ಮಾಣ ಆಗುವವರೆಗೂ ನವನಗರ ಯೂನಿಟ್-2ರ ಸೆಕ್ಟರ್ ನಂ.88ರಲ್ಲಿ ಇರುವ ಬಿಟಿಡಿಎ ಕಟ್ಟಡವನ್ನು ವೈದ್ಯಕೀಯ ಕಾಲೇಜು ನಡೆಸಲು ಸಜ್ಜಗೊಳಿಸಲಾಗುತ್ತಿದೆ. ಒಟ್ಟು 100 ವಿದ್ಯಾರ್ಥಿಗಳಲ್ಲಿ ತಲಾ 35 ಜನರಂತೆ ಮೂರು ಬ್ಯಾಚ್ನಲ್ಲಿ ತರಗತಿ ನಡೆಸಲಾಗುವುದು. ಇದಕ್ಕಾಗಿ ತರಗತಿ ಕೊಠಡಿ, ಸಂಶೋಧನಾ ಕೊಠಡಿ, ಎಲ್ಲ ರೀತಿಯ ಲ್ಯಾಬ್ಗಳನ್ನು ತಯಾರಿ ಮಾಡಲಾಗುತ್ತಿದೆ. ತರಗತಿ ನಡೆಯುವ ಮುಖ್ಯ ಕಟ್ಟಡದ ಆಧುನೀಕರಣ ಕಾರ್ಯವನ್ನು ಇಂದು ಪರಿಶೀಲಿಸಿ, ಅ.15ರೊಳಗಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
ಬೋಧಕ-ಬೋಧಕೇತರ ಸಿಬ್ಬಂದಿ ನೇಮಕ :
ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ದಕ್ಷ ಅಧಿಕಾರಿ ಡಾ।ಬಿ.ಎಚ್. ನಾಯರಾಯಣಿ ಅವರನ್ನು ವಿಶೇಷಾಧಿಕಾರಿಯಾಗಿ ನೇಮಕ ಮಾಡಿದ್ದು, ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಗ್ರಾಮೀಣ ಹಾಗೂ ಪ್ರತಿಭಾವಂತ ಮಕ್ಕಳ, ವೈದ್ಯಕೀಯ ಶಿಕ್ಷಣದ ಕನಸು ಈಡೇರಬೇಕೆಂಬ ನಮ್ಮ ತಂದೆ ದಿ.ಎಚ್.ವೈ. ಮೇಟಿ ಅವರ, ದೂರದೃಷ್ಟಿಯ ಯೋಜನೆ, ಬರಲಿರುವ ಅಕ್ಟೋಬರ್ ತಿಂಗಳಿಂದ ಅಧಿಕೃತವಾಗಿ ಆರಂಭಗೊಳ್ಳುತ್ತಿರುವುದು ನಮಗೆಲ್ಲ ಖುಷಿ-ಸಂತಸ ತಂದಿದೆ ಎಂದು ಹೇಳಿದ್ದಾರೆ.
ಕಾಮಗಾರಿ ಪರಿಶೀಲನೆ :
ನವನಗರ ಯೂನಿಟ್-2ರ ಸೆಕ್ಟರ್ ನಂ.88ರಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ಬ್ಯಾಚ್ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲಾಯಿತು. ಹೊಸದಾಗಿ ಆರಂಭಗೊಂಡ ಕಾಲೇಜಿನಲ್ಲಿ ನಾವು ಮೊದಲ ಬ್ಯಾಚ್ನ ವಿದ್ಯಾರ್ಥಿಗಳಾಗಿ ಪ್ರವೇಶ ಸಿಕ್ಕಿರುವುದು ನಮಗೆ ಸಂತಸ ತಂದಿದೆ ಎಂದು ಹಲವು ವಿದ್ಯಾರ್ಥಿಗಳು ಹೇಳಿಕೊಂಡರು. ಅಲ್ಲದೇ ಡಾ।ನಾರಾಯಣಿ ಹಾಗೂ ನಮ್ಮ ಪಕ್ಷದ ಪ್ರಮುಖರೊಂದಿಗೆ ಕಟ್ಟಡ ಆಧುನೀಕರಣದ ಕಾಮಗಾರಿಯನ್ನು ಪರಿಶೀಲಿಸಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ವೈದ್ಯಕೀಯ ಕಾಲೇಜು ಆರಂಭಕ್ಕೆ ಸಹಕಾರ ನೀಡಲು ಸೂಚಿಸಲಾಯಿತು.
ಈ ವೇಳೆ ಬುಡಾ ಅಧ್ಯಕ್ಷ ರಜಾಕ ಬೇನೂರ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಕ್ಬರ್ ಮುಲ್ಲಾ, ಎಸ್.ಎನ್. ರಾಂಪುರ, ಪ್ರಮುಖರಾದ ಹೊಳಬಸು ಶೆಟ್ಟರ, ಮಲ್ಲಿಕಾರ್ಜುನ ಮೇಟಿ, ನಿಂಗಣ್ಣ ಕೋಟಿ, ನಾರಾಯಣ ದೇಸಾಯಿ, ಗಣಪತಸಾ ದಾನಿ, ಶಿವಕುಮಾರ ನಂದಿಕೋಲಮಠ, ದ್ಯಾಮಣ್ಣ ಗಾಳಿ, ಹಾಜಿಸಾಬ ದಂಡಿನ, ಶಂಕರ ಮಂಕಣಿ, ದೇವಿಪ್ರಸಾದ ನಿಂಬಲಗುಂದಿ ಮುಂತಾದವರು ಉಪಸ್ಥಿತರಿದ್ದರು.




ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ