ಸರ್ವಚೈತನ್ಯ ಪ್ರಜ್ಞೆಯಿಂದಲೇ ವಿಶ್ವಕರ್ಮರು ವಿಶೇಷ : ಡಾ.ವೀರಣ್ಣ ಚರಂತಿಮಠ

ಬಿಜೆಪಿ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಬಾಗಲಕೋಟೆ: ಗುಣಭೇದ, ಸ್ವಭಾವಭೇದ ಹಾಗೂ ವಸ್ತುಭೇದವಿಲ್ಲದೆ ಸಕಲವನ್ನೂ ಸಕಲರಿಗಾಗಿ ಸೃಷ್ಟಿಸಿ ಕೊಡುವವರು ವಿಶ್ವಕರ್ಮರು. ಸರ್ವಚೈತನ್ಯ ಪ್ರಜ್ಞೆಯಿಂದಲೇ ವಿಶ್ವಕರ್ಮರು ವಿಶೇಷವೆನಿಸಿದ್ದಾರೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಶಿವಾನಂದ ಜೀನನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ಬಾಗಲಕೋಟೆ ಮತಕ್ಷೇತ್ರದ ವತಿಯಿಂದ ಗುರುವಾರ ಆಯೋಜಿಸಿದ್ದ ಭಗವಾನ್ ವಿಶ್ವಕರ್ಮ ಜಯಂತಿ ಹಾಗೂ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ವಿಶ್ವಕರ್ಮ ಪ್ರಭುವಿನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಪ್ರಕೃತಿಯ ತತ್ತ್ವವನ್ನು ಅರಿತು, ಭೌತವಸ್ತುಗಳ ಆಂತರ್ಯವನ್ನು ತಿಳಿದು, ಅವುಗಳ ಜೀವಂತಿಕೆಯನ್ನು ಅರ್ಥ ಮಾಡಿಕೊಂಡು, ಅದರೊಳಗಿನ ಆಕೃತಿಯನ್ನು ಪ್ರಕ್ರಿಯಾತ್ಮಕವಾಗಿ ಹೊರತರುವವರು ವಿಶ್ವಕರ್ಮರು. ಜಗತ್ತಿನ ಕಣ್ಣಿಗೆ ಜಡವಾಗಿ ಕಾಣುವ ಹಾಗೂ ಅನುಪಯುಕ್ತವೆನಿಸುವ ಧಾತುಗಳನ್ನು ಚೈತನ್ಯಶೀಲಗೊಳಿಸಿ, ಅವುಗಳನ್ನು ಸಾಮಾಜಿಕ ವಿವೇಕವಾಗಿ ಪರಿವರ್ತಿಸಿದ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ ಶಿಲ್ಪಕಲೆ, ಕಾಷ್ಟಶಿಲ್ಪ, ಲೋಹಶಿಲ್ಪ, ರಜತಶಿಲ್ಪ ಹಾಗೂ ಕಂಚುಶಿಲ್ಪಗಳ ಮೂಲಕ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಟ್ಟಿಕೊಟ್ಟಿರುವ ವಿಶ್ವಕರ್ಮ ಸಮುದಾಯ,  ಪ್ರದಾನಿ ನರೇಂದ್ರ ಮೋದಿಯವರು ವಿಶ್ವಕರ್ಮ ಯೋಜನೆ ಮೂಲಕ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಸಮಾಜದ ಮುಖಂಡರಾದ ವಿ.ವಿ.ಪತ್ತಾರ, ನಾಗೇಶ ಬರಗಿ, ಶ್ರೀಕಾಂತ ಪತ್ತಾರ, ಈರಣ್ಣ ಪತ್ತಾರ ಬೇವೂರ, ಬಸವರಾಜ ಯಂಕAಚಿ, ಉಮೇಶ ಹಂಚಿನಾಳ, ಸತ್ಯನಾರಾಯಣ ಹೇಮಾದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು