ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ

ರೈತರಿಗೆ 8 ಗಂಟೆ ತ್ರಿಫೇಸ್ ವಿದ್ಯುತ್ ನೀಡಲಿ: ವೀರಣ್ಣ ಚರಂತಿಮಠ

ಬಾಗಲಕೋಟೆ: ರೈತರಿಗೆ ಕನಿಷ್ಠ 8 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ರೈತರು ಬಂಡಾಯವೆದ್ದರೆ ಸರ್ಕಾರ ಉಳಿಯುವುದಿಲ್ಲ ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಆಗ್ರಹಿಸಿದರು.


ನಗರದ ಶಿವಾನಂದ ಜಿನ್‌ನಿಂದ ಬಸವೇಶ್ವರ ವೃತ್ತದವರೆಗೆ ಭಾರತೀಯ ಜನತಾ ಪಕ್ಷದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರಿಗೆ ಕನಿಷ್ಠ 8 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ವಿವಿಧ ಸೌಲಭ್ಯಗಳನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದರೂ, ತಪಾಸಣೆ ಹಾಗೂ ಇತರ ಕಾರಣಗಳ ಹೆಸರಿನಲ್ಲಿ ಅನೇಕ ಜನರನ್ನು ಸೌಲಭ್ಯಗಳಿಂದ ಹೊರಗಿಡಲಾಗುತ್ತಿದೆ. ಅತಿಥಿ ಉಪನ್ಯಾಸಕರಿಗೆ ಕಳೆದ 8–9 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ಇಲಾಖೆಗಳ ನೌಕರರಿಗೆ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುವ ಕ್ರಮ ಕೈಗೊಂಡಿಲ್ಲ. ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಘೋಷಣೆಗಳನ್ನು ಮಾಡುವಂತೆ ಹಣಕಾಸು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು.

ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಲಾಗಿದೆ. ಬರ ಪರಿಸ್ಥಿತಿ ಎದುರಿಸುತ್ತಿರುವ ಗ್ರಾಮಗಳನ್ನು ಗುರುತಿಸಿ ಯುದ್ಧೋಪಾದಿಯಲ್ಲಿ ಬರ ಕಾಮಗಾರಿಗಳನ್ನು ಆರಂಭಿಸಬೇಕಿತ್ತು. ಆದರೆ ಸರ್ಕಾರ ಬರ ಘೋಷಣೆ ಮಾಡುವಲ್ಲಿಯೇ ಕಾಲಹರಣ ಮಾಡುತ್ತಿದೆ. ರಾಜ್ಯದ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು, ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಹಣಕಾಸು ಇಲಾಖೆಯ ಪತ್ರವೇ ರಾಜ್ಯ ಸರ್ಕಾರದ ದಿವಾಳಿತನದ ಕನ್ನಡಿಯಾಗಿದೆ. ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಮುಖ್ಯಮಂತ್ರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸವರಾಜ ಯಂಕಂಚಿ, ಮಲ್ಲಯ್ಯ ಮೂಗನೂರಮಠ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ, ಸುರೇಶ ಮಜ್ಜಗಿ, ಶಿವಾನಂದ ಟವಳಿ, ದುಂಡಪ್ಪ ಏಳಮ್ಮಿ, ಉಮೇಶ ಹಂಚಿನಾಳ, ಶಶಿಕಲಾ ಮಜ್ಜಗಿ, ಜಯಾ ಭದ್ರಶೇಟ್ಟಿ, ನಾಗರತ್ನಾ ಹಡಗಲಿ, ಶಿವಲೀಲಾ ಹಿರೇಮಠ, ಶ್ರೀನಾಥ ಸಜ್ಜನ, ಮಾನೇಶ ಅಂಬಿಗೇರ, ರಾಜು ಸಿಂತ್ರೆ, ರಾಜು ಕೋಟಿಕಲ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಶಿವಾನಂದ ಜಿನ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ ತಲುಪಿ, ಅಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಲಾಯಿತು.

ಮಾಧವಿ ಲತಾ ಪ್ರವೇಶ ನಿಷೇಧ ಖಂಡನೀಯ: ವೀರಣ್ಣ ಚರಂತಿಮಠ

ಹಿಂದೂ ನಾಯಕಿ ಮಾಧವಿ ಲತಾ ಅವರ ಬಾಗಲಕೋಟೆ ಜಿಲ್ಲಾ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶ ಖಂಡನೀಯ ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.

ಕಾಮೆಂಟ್‌ಗಳು