ನಾ ಹಿಂಗೆ, ನೀ ಹಂಗೆ’ ವಿಶೇಷ ಸಂವಾದ

ದಾಂಪತ್ಯ ಜೀವನದ ಸಂತಸಕ್ಕೆ ಸಂವಾದವೇ ಬುನಾದಿ: ಮಹೇಶ ಮಾಶ್ಯಾಳ

ಬಾಗಲಕೋಟೆ: ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವುದು, ಮುಕ್ತವಾಗಿ ಸಂವಹನ ನಡೆಸುವುದು ಹಾಗೂ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸುವುದರಿಂದ ಕುಟುಂಬದಲ್ಲಿ ಸಂತಸ ಮತ್ತು ನೆಮ್ಮದಿ ನೆಲೆಸಲು ಸಾಧ್ಯ. ದಾಂಪತ್ಯ ಜೀವನದ ಸಂತಸಕ್ಕೆ ಸಂವಾದವೇ ಬುನಾದಿ ಎಂದು ವಿಸ್ತಾರ ಜಿಂದಗಿಯ ಮಹೇಶ ಮಾಶ್ಯಾಳ ಹೇಳಿದರು.




ಬಿ.ವಿ.ವಿ. ಸಂಘದ ಬಿಪ್ಸ್ ಶಾಲೆ ಹಾಗೂ ವಿಸ್ತಾರ ಜಿಂದಗಿ ವತಿಯಿಂದ ಶನಿವಾರ ಬಿಇಸಿ ಸಭಾಂಗಣದಲ್ಲಿ ದಂಪತಿಗಳಿಗಾಗಿ ಪ್ರಥಮ ಬಾರಿಗೆ ಆಯೋಜಿಸಿದ್ದ ‘ನಾ ಹಿಂಗೆ, ನೀ ಹಂಗೆ’ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಯ ಪಾಲನೆ, ಪರಸ್ಪರ ಗೌರವ ಹಾಗೂ ನಿರಂತರ ಸಂವಾದದ ಮೂಲಕ ಕೌಟುಂಬಿಕ ಕರ್ತವ್ಯಗಳನ್ನು ಅರಿತು ಸಮೃದ್ಧ ಜೀವನ ನಡೆಸಬೇಕು. ತಂದೆ-ತಾಯಿ, ಮಕ್ಕಳು ಹಾಗೂ ಹಿರಿಯರ ನಡುವಿನ ಕುಟುಂಬ ಸಂಬಂಧಗಳ ಗಟ್ಟಿತನವನ್ನು ಕಾಪಾಡಿಕೊಳ್ಳುವುದು ಅಗತ್ಯ. ಹಿಂದಿನ ಹಾಗೂ ಮುಂದಿನ ಪೀಳಿಗೆಯ ನಡುವೆ ಪರಸ್ಪರ ಅರಿವು ಮತ್ತು ಉತ್ತಮ ಸಂವಹನ ಇರಬೇಕು ಎಂದರು.

ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅವಿಭಕ್ತ ಕುಟುಂಬ ಭಾರತೀಯ ಪರಂಪರೆಯ ಪ್ರಮುಖ ಭಾಗವಾಗಿದೆ. ಪರಸ್ಪರರನ್ನು ಅರ್ಥೈಸಿಕೊಂಡು ಹೊಂದಾಣಿಕೆಯಿಂದ ಬದುಕುವ ಮೂಲಕ ಕುಟುಂಬ ವ್ಯವಸ್ಥೆಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಬಿಪ್ಸ್ ಶಾಲೆಯ ನಿರ್ದೇಶಕ ಸುರೇಶ ಹೆಗಡೆ, ಪ್ರಾಚಾರ್ಯ ಮಂಗಳಾದೇವಿ ಹೆಗಡೆ ಸೇರಿದಂತೆ ವಿವಿಧ ಶಾಲೆಗಳ ಪ್ರಾಚಾರ್ಯರು, ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು