ಬರಗಾಲದಲ್ಲಿ ಗ್ಯಾರಂಟಿ ಯೋಜನೆಗಳೇ ಆಧಾರ- ಗ್ಯಾರಂಟಿ ಇಲ್ಲದಿದ್ದರೇ ಹಾಹಾಕಾರ ಶುರುವಾಗುತ್ತಿತ್ತು: ಮಾಜಿ ಸಚಿವ ಆರ್ ಬಿ ತಿಮ್ಮಾಪೂರ
ರಾಜ್ಯಾದ್ಯಂತ ಬೆಳೆವಿಮೆಯಲ್ಲಿ ಭಾರಿ ಅಕ್ರಮ- ಸಮಗ್ರ ತನಿಖೆಗೆ ಆರ್ ಬಿ ತಿಮ್ಮಾಪೂರ ಆಗ್ರಹ*
ಬೆಂಗಳೂರು: ಬರಗಾಲದಲ್ಲಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಜನರ ಕೈ ಹಿಡಿದಿದ್ದು, ಬಿಜೆಪಿಗೆ ರೈತರ ಪರ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಮಾಜಿ ಸಚಿವ, ಮುಧೋಳ ಶಾಸಕರಾದ ಆರ್ ಬಿ ತಿಮ್ಮಾಪೂರ ಅವರು ಕಿಡಿಕಾರಿದ್ದಾರೆ.
ಇಂದು ವಿಧಾನಸಭೆ ಕಲಾಪದಲ್ಲಿ ಬರಗಾಲದ ಕುರಿತು ಚರ್ಚೆ ವೇಳೆ ಮಾತಮಾಡಿದ ಆರ್ ಬಿ ತಿಮ್ಮಾಪೂರ ಅವರು, ರೈತರ ಪರ ಮಾಡುವ ನೈತಿಕತೆ ಇಲ್ಲ. ರಾಜ್ಯಕ್ಕೆ ಅನುಕೂಲ ಆಗುವ ಯೋಜನೆಗಳ ಬಗ್ಗೆ ಯಾವುದೇ ಚರ್ಚೆ ಮಾಡಲ್ಲ. ಕೃಷ್ಣ ಮೇಲ್ದಂಡೆ ಎತ್ತರಕ್ಕೆ ಅಧಿಸೂಚನೆ ಹೊರಡಿಸಿದ್ರೇ ಇನ್ನೂ 100 ಟಿಎಂಸಿ ನೀರು ಶೇಖರಣೆ ಮಾಡಿಕೊಳ್ಳಬಹುದಾಗಿತ್ತು. ಬಿಜೆಪಿಯವರು ವೃತಃ ಆರೋಪ ಮಾಡೋದು ಬಿಟ್ಟು, ರೈತರ ಪರ ಕೆಲಸ ಮಾಡುವ ಬಗ್ಗೆ ಗಮನ ಕೊಡಬೇಕು ಎಂದು ತಿಮ್ಮಾಪೂರ ಅವರು ಟೀಕಿಸಿದರು.
ಕೇಂದ್ರ ಸರ್ಕಾರ ಬರ ನಿಯಮಾವಳಿಗಳನ್ನು ಬದಲಾಯಿಸಬೇಕು. ಈಗ ಬರಗಾಲ ಬಂದಿದ್ದರೂ ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ಜನರ ಕೈ ಹಿಡಿದಿವೆ. ಗ್ಯಾರಂಟಿ ಯೋಜನೆಗಳಿಲ್ಲದಿದ್ದರೇ ಹಾಹಾಕಾರ ಶುರುವಾಗುತ್ತಿತ್ತು. ಬಡವರಿಗೆ ಅನ್ನಭಾಗ್ಯ ಹೊಟ್ಟೆ ತುಂಬಿಸುತ್ತಿದೆ. ಗೃಹಲಕ್ಷ್ಮಿ ಆಶ್ರಯ ನೀಡಿದೆ. ಗ್ಯಾರಂಟಿ ಯೋಜನೆ ಮೂಲಕ ರೈತರು, ಬಡವರ ಪರವಾಗಿ ಸರ್ಕಾರ ನಿಂತಿದೆ ಎಂದು ಸರ್ಕಾರವನ್ನು ಶ್ಲಾಘಿಸಿದರು.
ನಮ್ಮ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಬರಗಾಲದ ಸಮಸ್ಯೆ ಇದೆ. ನೆರವಿಗೆ ಬನ್ನಿ ಅಂತಾ ಕೇಳಿದ್ದಾರೆ. ಆದ್ರೆ, ಉತ್ತರ ಇಲ್ಲ. ಪ್ರಧಾನಿ ಮೋದಿ, ವಿತ್ತ ಸಚಿವರು ಉತ್ತರ ಕೊಟ್ಟಿದ್ದಾರಾ? ಕೇಂದ್ರ ಸರ್ಕಾರದ ಮಂತ್ರಿಗಳು ಯಾರಾದರೂ ಬಾಯಿ ಬಿಟ್ಟಿದ್ದಾರಾ? ಎಂದು ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಕಿಡಿಕಾರಿದರು.
ಮೂರು ದಿನಗಳಿಂದ ವಿಶೇಷ ಚರ್ಚೆ ನಡೆಯುತ್ತಿದೆ. ಆದರೇ, ಬಿಜೆಪಿ, ಜೆಡಿಎಸ್ ನಾಯಕರು ಯಾರು ರಾಜ್ಯ ಸರ್ಕಾರದ ಪರ ನಿಲ್ಲುವ ಮಾತೇ ಆಡಿಲ್ಲ. ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ. ಎಲ್ಲರೂ ಒಟ್ಟಾಗಿ ಹೋಗಿ ಪರಿಹಾರ ಪಡೆಯಲು ಮಾತಾಡೋಣ ಅಂತಾ ಹೇಳಿದ್ದರೇ.. ರಾಜ್ಯದ ಜನರು ಶಹಬ್ಬಾಸ್ ಅಂದಿರೋರು. ಅದನ್ನ ಬಿಟ್ಟು ಕೇವಲ ರಾಜ್ಯ ಸರ್ಕಾರವನ್ನು ಟೀಕೆ ಮಾಡೋದಕ್ಕೆ ಸೀಮಿತ ಆಗಿದ್ದೀರಾ? ಜನರಿಗೆ ಎಲ್ಲವೂ ಅರ್ಥ ಆಗುತ್ತದೆ. ಕೇಂದ್ರ ಸರ್ಕಾರದಿಂದ ತಾರತಮ್ಯ ಆಗ್ತಿದೆ.
ಬರಗಾಲ ಅಂದ್ರೇ ಗುಜರಾತ್‌ಗೆ ಸಾವಿರ ಕೋಟಿ ಕೊಟ್ರೇ, ರಾಜ್ಯಕ್ಕೆ ಯಾಕೆ ಅನ್ಯಾಯ. ಎಥೆನಾಲ್ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ. ಜಿಎಸ್‌ಟಿ ವಿಚಾರದಲ್ಲಿ ತಾರತಮ್ಯ. ಎಲ್ಲವನ್ನೂ ರಾಜಕೀಯವಾಗಿ ನೋಡೊದು ಸರಿಯಲ್ಲ ಎಂದು ಕಿಡಿಕಾರಿದರು.
ಬೆಳೆ ವಿಮೆ ಅನ್ನೋದು ಭಯಾನಕ ಆಗಿದೆ. ಇದು ಏಜೆಂಟ್‌ಗಳು ಹಣ ಹೊಡೆಯುವಂತಹ ಯೋಜನೆ ಆಗಿದೆ. ನಿಜವಾದ ರೈತರಿಗೆ ಸಹಾಯವಾಗ್ತಿಲ್ಲ. ಎಲ್ಲಾ ಜಿಲ್ಲೆಗಳಲ್ಲಿ ದುರುಪಯೋಗ ಆಗಿದೆ. ರೈತರಿಂದ ಐಡಿ ಕಾರ್ಡ್ ಪಡೆದು, ಏಜೆಂಟ್‌ಗಳೇ ಹಣ ತುಂಬಿ ಅಕ್ರಮ ನಡೆಸ್ತಿದ್ದಾರೆ. ಈರುಳ್ಳಿ ಇದ್ರೇ ಶೆಂಗಾ ಅಂತಾ ಬರೆಸ್ತಾರೆ. ನಮ್ಮ ಮುಧೋಳ ಸೇರಿದಂತೆ ಬೀದರ್‌ನಿಂದ ಚಾಮರಾಜನಗರದವರೆಗೆ ಅಕ್ರಮ ಆಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ