ಲಸಿಕಾ ಮಾಸಾಚರಣೆಗೆ ಸಿಇಒ ಗಜಾನನ ಬಾಲೆ ಚಾಲನೆ
ಬಾಗಲಕೋಟೆ, ಸೆ.28: ಹುಚ್ಚುನಾಯಿ ರೋಗ (ರೇಬಿಸ್) ನಿಯಂತ್ರಣ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ರೇಬಿಸ್ ನಿರೋಧಕ ಲಸಿಕಾ ಮಾಸಾಚರಣೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಚಾಲನೆ ನೀಡಿದರು.
ನಗರದ ನವನಗರದ ಜಿಲ್ಲಾ ಪಶು ಆಸ್ಪತ್ರೆಯಲ್ಲಿ ಸೋಮವಾರ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೇಬಿಸ್ ಗಂಭೀರ ರೋಗವಾಗಿದ್ದು, ಸಾಕು ನಾಯಿಗಳು ಸೇರಿದಂತೆ ಇತರ ಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ರೇಬಿಸ್ ನಿರೋಧಕ ಲಸಿಕೆ ಹಾಕಿಸುವ ಮೂಲಕ ರೋಗದ ಹರಡುವಿಕೆಯನ್ನು ನಿಯಂತ್ರಿಸಬಹುದು. ಸಾಕು ನಾಯಿಗಳ ಮಾಲೀಕರು ನಿಯಮಿತವಾಗಿ ಲಸಿಕೆ ಹಾಕಿಸುವುದರ ಜತೆಗೆ ಪ್ರಾಣಿಗಳ ಆರೋಗ್ಯದ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ರೇಬಿಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಶಾಲಾ–ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ಮರಿ ಹಾಕಿರುವ ನಾಯಿಗಳನ್ನು ಹಾಗೂ ಆಹಾರ ಸೇವಿಸುವಾಗ ನಾಯಿಗಳನ್ನು ತಡೆಯಬಾರದು. ಅಂತಹ ಸಂದರ್ಭದಲ್ಲಿ ಅವುಗಳು ಕಚ್ಚುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೇಬಿಸ್ ಜಾಗೃತಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು. ವಿವಿಧ ತಳಿಯ ನಾಯಿಗಳ ಕುರಿತು ಮಾಹಿತಿ ಪಡೆದ ಸಿಇಒ, ಪಶು ಆಸ್ಪತ್ರೆಯ ಕ್ಷ–ಕಿರಣ ಕೊಠಡಿ, ಸಣ್ಣ ಪ್ರಾಣಿಗಳ ಶಸ್ತ್ರಚಿಕಿತ್ಸಾ ಕೊಠಡಿ, ಔಷಧ ದಾಸ್ತಾನು ಕೊಠಡಿ ಹಾಗೂ ವಿವಿಧ ಪ್ರಯೋಗಾಲಯಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಎಸ್.ಎಚ್. ಕರಡಿಗುಡ್ಡ, ಜಿಲ್ಲಾ ಪಶು ಆಸ್ಪತ್ರೆಯ ಉಪನಿರ್ದೇಶಕ ಶಿವಕುಮಾರ ಹೊಳೆಪ್ಪಗೋಳ ಸೇರಿದಂತೆ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.



ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ