ರೇಬೀಸ್‌ ತಡೆಗೆ ಮುಂಜಾಗ್ರತೆ ಅಗತ್ಯ:ಡಾ.ಸೂರ್ಯವಂಶಿ

ರೇಬಿಸ್‌ ತಡೆಗೆ ಲಸಿಕೆ, ಗಾಯದ ಆರೈಕೆ ಮುಖ್ಯ

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸಮೀಕ್ಷಾ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ರೇಬಿಸ್‌ ನಿಯಂತ್ರಣ ಕಾರ್ಯಕ್ರಮವು ನವನಗರದ ತೇಜಸ್‌ ಇಂಟರ್‌ನ್ಯಾಷನಲ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಷನ್ಸ್‌ನ ಎಂಆರ್‌ಎನ್‌ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ  ಸಭಾಂಗಣದಲ್ಲಿ ಸೋಮವಾರ ನಡೆಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಅಶೋಕ ಸೂರ್ಯವಂಶಿ ಮಾತನಾಡಿ, ರೇಬಿಸ್‌ ವಿರುದ್ಧ ಮೊದಲ ಲಸಿಕೆ ಕಂಡುಹಿಡಿದ ಲೂಯಿ ಪಾಶ್ಚರ್‌ ಅವರ ಮರಣದ ದಿನವಾದ ಸೆ.28ರಂದು 2007ರಿಂದ ವಿಶ್ವ ರೇಬಿಸ್‌ ದಿನವನ್ನಾಗಿ ಆಚರಿಸಲಾಗುತ್ತಿದೆ. ರೇಬಿಸ್‌ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ದಿನಾಚರಣೆಯ ಉದ್ದೇಶವಾಗಿದೆ ಎಂದರು.

ಪ್ರತಿವರ್ಷ ಸೆ.28ರಂದು ವಿಶ್ವ ರೇಬಿಸ್‌ ದಿನ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಸೋಂಕಿತ ಪ್ರಾಣಿಗಳ, ಅದರಲ್ಲೂ ನಾಯಿಗಳ ಕಡಿತದಿಂದ ರೇಬಿಸ್‌ ಹರಡುತ್ತದೆ. ರೇಬಿಸ್‌ ತಡೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಲಭ್ಯವಿದ್ದು, ನಾಯಿ ಸೇರಿದಂತೆ ಸಾಕುಪ್ರಾಣಿಗಳಿಗೆ ನಿಯಮಿತವಾಗಿ ರೇಬಿಸ್‌ ಲಸಿಕೆ ಹಾಕಿಸುವ ಮೂಲಕ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಎಪಿಡೆಮಿಯಾಲಜಿಸ್ಟ್‌ ಡಾ. ಸೀಮಾ ಹುದ್ದಾರ ಮಾತನಾಡಿ, ರೇಬಿಸ್‌ ಮಾರಣಾಂತಿಕ ವೈರಲ್‌ ಕಾಯಿಲೆಯಾಗಿದ್ದು, ಮಾನವ ಸೇರಿದಂತೆ ಸಸ್ತನಿಗಳ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿತ ಪ್ರಾಣಿಯ ಕಡಿತ ಅಥವಾ ಜೊಲ್ಲು ಗಾಯದ ಸಂಪರ್ಕಕ್ಕೆ ಬಂದಾಗ ವೈರಸ್‌ ಹರಡಬಹುದು. ರೋಗಲಕ್ಷಣಗಳು ಕಾಣಿಸಿಕೊಂಡ ಬಳಿಕ ರೇಬಿಸ್‌ ಬಹುತೇಕ ಮಾರಣಾಂತಿಕವಾಗುವುದರಿಂದ, ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಸ್ವಚ್ಛಗೊಳಿಸಿ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಮುಖ್ಯ ಎಂದರು.

ರೇಬಿಸ್‌ ಸೋಂಕನ್ನು ಸಮಯಕ್ಕೆ ಸರಿಯಾಗಿ ಗಾಯದ ಆರೈಕೆ, ಲಸಿಕೆ ಹಾಗೂ ಅಗತ್ಯವಿದ್ದಲ್ಲಿ ಇತರ ವೈದ್ಯಕೀಯ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ದತ್ತಾಂಶ ವ್ಯವಸ್ಥಾಪಕ ಪ್ರವೀಣಕುಮಾರ ಕಾಶೀನಕುಂಟಿ, ಎಂಆರ್‌ಎನ್‌ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಚಾರ್ಯ ಡಾ. ಶಿವಕುಮಾರ್‌ ಎನ್‌. ಗಂಗಲ್‌, ವಿದ್ಯಾರ್ಥಿಗಳು ಇದ್ದರು.



ಕಾಮೆಂಟ್‌ಗಳು