ವಿವಿಧೆಡೆ ಸಿಇಒ ಅನಿರೀಕ್ಷಿತ ಭೇಟಿ: ಅಂಗನವಾಡಿ ಮುಂಭಾಗದ ಅಸ್ವಚ್ಛತೆಗೆ ನೋಟಿಸ್

ಆರೋಗ್ಯ, ನೈರ್ಮಲ್ಯ, ಶೈಕ್ಷಣಿಕ ಗುಣಮಟ್ಟ ಪರಿಶೀಲನೆ 

ಬಾಗಲಕೋಟೆ: ನಗರದ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಗಜಾನನ ಬಾಲೆ ಅವರು ಬುಧವಾರ ಅನಿರೀಕ್ಷಿತ ಭೇಟಿ ನೀಡಿ ಆರೋಗ್ಯ, ನೈರ್ಮಲ್ಯ, ಶಿಕ್ಷಣ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.


ವಾಂಬೆ ಕಾಲೋನಿಯ ಅಂಗನವಾಡಿ ಕೇಂದ್ರ ಸಂಖ್ಯೆ–2ಕ್ಕೆ ಭೇಟಿ ನೀಡಿದ ವೇಳೆ ಕೇಂದ್ರದ ಮುಂಭಾಗದ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ನಿಂತಿರುವುದು ಹಾಗೂ ತೀವ್ರ ಅಸ್ವಚ್ಛತೆ ಕಂಡುಬಂದಿತು. ಸಣ್ಣ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಸ್ವಚ್ಛತೆ ಕಂಡುಬಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಶೋಕಾಸ್ ನೋಟಿಸ್ ಜಾರಿಗೊಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಬಾಗಲಕೋಟೆ ಸಿಡಿಪಿಒ, ವೃತ್ತ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಚರಂಡಿ ತಡೆಯನ್ನು ತಕ್ಷಣ ತೆರವುಗೊಳಿಸಿ, ಅಂಗನವಾಡಿ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ವಾಂಬೆ ಕಾಲೋನಿ ಹಾಗೂ ಸೆಟಲ್‌ಮೆಂಟ್ ಕಾಲೋನಿಯ ನಮ್ಮ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ ಸಿಇಒ, ಔಷಧಗಳ ದಾಸ್ತಾನು, ರೋಗಿಗಳ ನೋಂದಣಿ, ಚಿಕಿತ್ಸಾ ಸೌಲಭ್ಯ ಹಾಗೂ ನೈರ್ಮಲ್ಯ ವ್ಯವಸ್ಥೆ ಪರಿಶೀಲಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆರೋಗ್ಯ ಸೇವೆ ನಿರಂತರವಾಗಿ ಒದಗಿಸುವಂತೆ ವೈದ್ಯಕೀಯ ಸಿಬ್ಬಂದಿಗೆ ಸೂಚಿಸಿದರು.

ಬಳಿಕ ನವನಗರದ ಸೆಕ್ಟರ್‌ 41ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ–10ಕ್ಕೆ ಭೇಟಿ ನೀಡಿದ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳ ಕಲಿಕಾ ಮಟ್ಟ ಅರಿಯಲು ಗಣಿತದ ಲೆಕ್ಕಗಳನ್ನು ನೀಡಿ ಪರಿಶೀಲಿಸಿದರು. ಶಾಲಾ ಕಟ್ಟಡದ ಬಲ ಹಾಗೂ ಸ್ಥಿರತೆಯನ್ನೂ ಸ್ಥಳದಲ್ಲೇ ಪರಿಶೀಲಿಸಿದರು.

ಸರ್ಕಾರಿ ಸಂಸ್ಥೆಗಳಲ್ಲಿ ಸೇವಾ ಗುಣಮಟ್ಟ, ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸಬೇಕು ಎಂದು ಸಿಇಒ ಗಜಾನನ ಬಾಲೆ ಸೂಚಿಸಿದರು.


ಕಾಮೆಂಟ್‌ಗಳು