ತೇರದಾಳದಲ್ಲಿ ಪ್ರಜಾಸೇವಾ ಆಂದೋಲನಕ್ಕೆ ಉತ್ತಮ ಸ್ಪಂದನೆ*

 *163 ಅರ್ಜಿಗಳ ಸ್ವೀಕಾರ | ಸ್ಥಳದಲ್ಲಿಯೇ ಹಲವು ಸಮಸ್ಯೆಗಳಿಗೆ ಪರಿಹಾರ

ಬಾಗಲಕೋಟೆ  : ಸರ್ಕಾರದ ಸೇವೆಗಳನ್ನು ಜನ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಪ್ರಜಾಸೇವಾ ಆಂದೋಲನಕ್ಕೆ ತೇರದಾಳದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು. 




         ಶನಿವಾರ ತೇರದಾಳದ ದಿನಸೇನಾಚಾರ್ಯ ಸಭಾಭವನದಲ್ಲಿ ಹಮ್ಮಿಕೊಂಡ ಪ್ರಜಾಸೇವಾ ಆಂದೋಲನ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತಮ್ಮ ವಿವಿಧ ಅಹವಾಲುಗಳಿಗೆ ಸಂಬಂಧಿಸಿದಂತೆ ಒಟ್ಟು 163 ಅರ್ಜಿಗಳನ್ನು ಸಲ್ಲಿಸಿದರು. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ದೊಡ್ಡವ್ವ ಲಾತೂರ, ಮಾಯವ್ವ ಸುನದೂಳಿ, ಸುರೇಶ ಅರಭಾವಿ, ಸುರೇಶ ಚೌದಲೆ ಹಾಗೂ ಪಾರ್ವತಿ ರಾವಳ ಎಂಬ ಅರ್ಹ ಐದು ಫಲಾನುಭವಿಗಳಿಗೆ ವಿವಿಧ ಪಿಂಚಣಿ ಯೋಜನೆಗಳ ಮಂಜೂರಾತಿ ಆದೇಶಗಳನ್ನು ವಿತರಿಸಲಾಯಿತು. ಆಪದ ಮಿತ್ರ ತರಬೇತಿ ಪಡೆದವರಿಗೆ ಕಿಟ್‍ಗಳನ್ನು ವಿತರಿಸಲಾಯಿತು.

          ರೈತರು ಎದುರಿಸುತ್ತಿರುವ ಪಂಪ್‍ಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸಮಸ್ಯೆ ಕುರಿತು ಸಭೆಯಲ್ಲಿ ಗಮನ ಸೆಳೆದರು. ಈ ಹಿನ್ನಲೆಯಲ್ಲಿ ಸ್ಥಳದಲ್ಲಿಯೇ ಹೆಸ್ಕಾಂ ಅಧೀಕ್ಷಕ ಅಭಿಯಂತರ ಯಂಕಂಚಿ ಅವರನ್ನು ಸಂಪರ್ಕಿಸಿದ ಸಚಿವರು ರೈತರ ಪಂಪ್‍ಸೆಟ್‍ಗಳಿಗೆ ಪ್ರತಿದಿನ ಆರು ಕಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಸೂಚನೆ ನೀಡಿದರು. ಘಟಪ್ರಭಾ ನದಿಗೆ ನೀರು ಬಡುಗಡೆ ಮಾಡುವಂತೆ ರೈತರು ಒತ್ತಾಯಿಸಿದರು. ಅಲ್ಲದೇ ಸಸಾಲಟ್ಟಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ತ್ವರಿತಗತಿಯಲ್ಲಿ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

          ಈ ವೇಳೆ ಮಾತನಾಡಿದ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಜನರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಮೂಲಕ ಪ್ರಜಾಸೇವಾ ಆಂದೋಲನ ಜನರೊಂದಿಗೆ ಸರ್ಕಾರದ ನೇರ ಸಂಪರ್ಕಕ್ಕೆ ವೇದಿಕೆಯಾಗಿದೆ. ಸರ್ಕಾರದ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಸರಕಾರದ ಉದ್ದೇಶವಾಗಿದೆ. ಸೆಪ್ಟೆಂಬರ 5 ರಂದು ರಾಜ್ಯಾದ್ಯಂತ ಪ್ರಜಾಸೇವಾ ಆಂದೋಲನಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಪ್ರಥಮವಾಗಿ ಗುಳೇದಗುಡ್ಡ ತಾಲೂಕಿನಲ್ಲಿ ಈ ಆಂದೋಲನ ನಡೆಸಲಾಗಿದ್ದು, ಇದು ಎರಡನೇಯದಾಗಿದೆ ಎಂದರು.

         ಯುವಕರಿಗೆ ಸಾಮಾಜಿಕ ಹಾಗೂ ಅಭಿವೃದ್ದಿ ಚಟುವಟಿಕೆಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಭಾರತ ಜೋಡೋ ಸಂಘಗಳನ್ನು ಸಂಘಟಿಸಲಾಗುತ್ತಿದೆ. ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರತಿ ಸಂಘಕ್ಕೆ 10 ಲಕ್ಷ ರೂ.ಗಳ ಅನುದಾನ ನೀಡುವ ಉದ್ದೇಶವಿದೆ. ಸಂಘಗಳ ಸದಸ್ಯತ್ವ ಅಭಿಯಾನ ಈಗಾಗಲೇ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರ್ಪಡೆಯಾಗಬೇಕು ಎಂದು ಸಚಿವರು ಕರೆ ನೀಡಿದರು.

          ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ ಜನರ ಸಮಸ್ಯೆಗಳನ್ನು ಆಲಿಸಲು ಉತ್ತಮ ವೇದಿಕೆಯಾಗಿದ್ದು, ಸ್ವೀಕೃತವಾದ ಅರ್ಜಿಗಳಿಗೆ ನಿಗಧಿತ ವೇಳೆಯಲ್ಲಿ ಸ್ಪಂದಿಸಿ ವಿಲೇವಾರಿ ಮಾಡುವ ಕೆಲಸವಾಗಬೇಕು. ಈ ಭಾಗದ ರೈತರ ಪಂಪ್‍ಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುವದರ ಜೊತೆಗೆ ಹಲವು ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು. 

          ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ, ತಾಲೂಕಾ ಅಧ್ಯಕ್ಷ ಬಸವಂತಗೌಡ ಪಾಟೀಲ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ಕಾಮೆಂಟ್‌ಗಳು