ಬಾಗಲಕೋಟೆ: ಅಕ್ಟೋಬರ್ 17 ಮತ್ತು 18ರಂದು ‘ಗ್ಲೋಬ್ ಇನ್ ಗ್ಲೋಬ್ಯೂಲ್ 2.0’ ಸಮ್ಮೇಳನ

ಬಾಗಲಕೋಟೆ: ಅಕ್ಟೋಬರ್ 17 ಮತ್ತು 18ರಂದು ‘ಗ್ಲೋಬ್ ಇನ್ ಗ್ಲೋಬ್ಯೂಲ್ 2.0’ ಸಮ್ಮೇಳನ

ಬಾಗಲಕೋಟೆ: ನಗರದ ನವನಗರದಲ್ಲಿರುವ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಸಭಾಭವನದಲ್ಲಿ ಅಕ್ಟೋಬರ್ 17 ಮತ್ತು 18ರಂದು ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಗ್ಲೋಬ್ ಇನ್ ಗ್ಲೋಬ್ಯೂಲ್ 2.0’ ನಡೆಯಲಿದೆ.

ಬಿ.ವಿ.ವಿ. ಸಂಘದ ಬಿವಿವಿಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.

ದೇಶದ ವಿವಿಧ ಭಾಗಗಳಿಂದ ಈಗಾಗಲೇ 1,000ಕ್ಕೂ ಹೆಚ್ಚು ವೈದ್ಯರು, ಸಂಶೋಧಕರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿಯ ಹೋಮಿಯೋಪಥಿ ಸಂಶೋಧಕರಾದ ಮುಂಬೈನ ಡಾ. ಶ್ರೀಪಾದ ಕೇಡಕರ್ ಮತ್ತು ಡಾ. ಮಯೂರೇಶ ಮಹಾಜನ ಅವರು ಸಂಕೀರ್ಣ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಡಾ. ರಮೇಶ ಜಿ.ಎಚ್. ಸಮ್ಮೇಳನ ಉದ್ಘಾಟಿಸಲಿದ್ದು, ಬೀದರಿನ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ. ವೀರಣ್ಣ ಸಿ. ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಹಾಗೂ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಸಾಸನೂರ ಉಪಸ್ಥಿತರಿರಲಿದ್ದಾರೆ.

ಈ ಕುರಿತು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಅರುಣ ಹೂಲಿ, ಡಾ. ರವಿ ಕೋಟೆಣ್ಣವರ ಹಾಗೂ ಡಾ. ಪ್ರದೀಪ ಕೆ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು